ಮನಪಾ ವಿಪಕ್ಷ ನಾಯಕನ ಆಯ್ಕೆ ಗೊಂದಲಕ್ಕೆ ಕಾಂಗ್ರೆಸ್‌ನ ಒಳಜಗಳ ಕಾರಣ: ಸುಧೀರ್ ಶೆಟ್ಟಿ

ಮಂಗಳೂರು, ಎ.2: ಮಹಾನಗರ ಪಾಲಿಕೆಯ ವಿಪಕ್ಷ ನಾಯಕನ ಆಯ್ಕೆ ಕುರಿತಂತೆ ಉಂಟಾಗಿರುವ ಗೊಂದಲಕ್ಕೆ ಕಾಂಗ್ರೆಸ್‌ನ ಒಳಜಗಳವೇ ಕಾರಣ ಎಂದು ಮನಪಾ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಳೆ ಸಂಪ್ರದಾಯವನ್ನು ಮುರಿದು ಮನಪಾದಲ್ಲಿ ತಮ್ಮ ಪಕ್ಷದ ನಾಯಕನ ಆಯ್ಕೆ ಕುರಿತಂತೆ ಮೇಯರ್ ಗಮನಕ್ಕೆ ತರುವ ಬದಲು ಪಾಲಿಕೆ ಆಯುಕ್ತರಿಗೆ ಪಕ್ಷದ ಜಿಲ್ಲಾಧ್ಯಕ್ಷರು ಪತ್ರ ಬರೆದಿರುವುದರಿಂದ ಕಾನೂನಾತ್ಮಕ ಸಮಸ್ಯೆಯನ್ನು ಹುಟ್ಟಿ ಹಾಕಿದೆ ಎಂದರು.
ಕಾನೂನಿನ ಪ್ರಕಾರ 60 ಸದಸ್ಯರಲ್ಲಿ ಮೂರನೇ ಒಂದು ಬಹುಮತ ಇದ್ದಲ್ಲಿ ಮಾತ್ರವೇ ಪ್ರತಿಪಕ್ಷ ಸ್ಥಾನ ನೀಡಬಹುದಾಗಿದೆ. ಮೇಯರ್‌ರವರ ಪ್ರಥಮ ಸಭೆಯಲ್ಲಿ ವಿಪಕ್ಷ ನಾಯಕರ ಆಯ್ಕೆ ನಡೆಯುತ್ತದೆ. ಆದರೆ ಕಾಂಗ್ರೆಸ್ ಪಕ್ಷದಿಂದ ವಿಪಕ್ಷ ನಾಯಕನಾಗಿ ಆಯ್ಕೆ ಮಾಡಲಾದ ವಿನಯ್‌ರಾಜ್‌ರವರು ಮೇಯರ್ ಗಮನಕ್ಕೆ ತಾರದೆ ವಿಪಕ್ಷ ನಾಯಕರ ಕೊಠಡಿಯಲ್ಲಿ ಗದ್ದಲದೊಂದಿಗೆ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಸಿದ್ದಾರೆ. ಹಾಗಿದ್ದರೂ ಹಿಂದೆ ಪಾಲಿಕೆ ಆಯುಕ್ತರಾಗಿ ಕಾರ್ಯ ನಿರ್ವಹಿಸಿರುವ ಕಾಂಗ್ರೆಸ್‌ನ ಮಾಜಿ ಶಾಸಕ ಜೆ.ಆರ್.ಲೋಬೋ, ಪ್ರಜಾಪ್ರಭುತ್ವದ ಮೌಲ್ಯ ಗಾಳಿಗೆ ತೂರಿ ಬಿಜೆಪಿ ಸರ್ವಾಧಿಕಾರಿ ಧೋರಣೆ ತೋರಿದೆ ಎಂದು ಹೇಳಿರುವುದು ಅಸಂಬದ್ಧ. ಅವರು ಮುನ್ಸಿಪಲ್ ಕಾಯ್ದೆ 1976ರ 88ನೆ ಪರಿಚ್ಛೇದದಲ್ಲಿ ನೀಡಿರುವ ಮಾಹಿತಿಯನ್ನು ಅರಿಯುವ ಅಗತ್ಯ ಇದೆ ಎಂದು ಸುಧೀರ್ ಶೆಟ್ಟಿ ಹೇಳಿದರು.
ಮಿಥುನ್ ರೈಯವರು ಕಾಂಗ್ರೆಸ್‌ನ 14 ಮಂದಿ ಸದಸ್ಯರು ರಾಜೀನಾಮೆ ನೀಡುವುದಾಗಿ ಹೇಳಿದ್ದು, ರಾಜೀನಾಮೆ ನೀಡಿದರೆ ಬಿಜೆಪಿ ಸಂತೋಷದಿಂದ ಸ್ವಾಗತಿಸಲಿದೆ ಮತ್ತು ಚುನಾವಣೆಯಲ್ಲಿ ಆ 14 ಸ್ಥಾನವನ್ನು ಬಿಜೆಪಿ ಗೆದ್ದು, ಕಾಂಗ್ರೆಸ್ ಮುಕ್ತ ನಗರ ಪಾಲಿಕೆಯನ್ನಾಗಿ ಮಾಡಲಿದೆ ಎಂದರು.
ವಿನಯ್‌ರಾಜ್ ಪ್ರತಿಪಕ್ಷದ ನಾಯಕನಾದರೆ ಭ್ರಷ್ಟಾಚಾರ ಎತ್ತಿ ಹಿಡಿಯುವ ಕೆಲಸ ಮಾಡಲಿದ್ದಾರೆಂಬ ಭಯ ಬಿಜೆಪಿಗಿದೆ ಎಂದು ಜೆ.ಆರ್. ಲೋಬೋ ಹೇಳಿದ್ದಾರೆ. ಒಬ್ಬ ಸಾಮಾನ್ಯ ವ್ಯಕ್ತಿ ಕೂಡಾ ಭ್ರಷ್ಟಾಚಾರ ಎತ್ತಿಹಿಡಿಯುವ ಕೆಲಸ ಮಾಡಬೇಕು. ಅದಕ್ಕೆ ಬಿಜೆಪಿ ಸಹಕಾರ ನೀಡಲಿದೆ ಎಂದು ಸುಧೀರ್ ಶೆಟ್ಟಿ ಪ್ರತಿಕ್ರಿಯಿಸಿದರು.
ಸ್ಮಾರ್ಟ್ ಸಿಟಿ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸೂಚಿಸಲಾದ ಎ.ಸಿ.ವಿನಯರಾಜ್ ಹೆಸರನ್ನು ಮನಪಾ ಆಡಳಿತ ಪರಿಗಣಿಸದಿರುವ ಕುರಿತಂತೆ ಪ್ರತಿಕ್ರಿಯಿಸಿದ ಸುಧೀರ್ ಶೆಟ್ಟಿ, ಸ್ಮಾರ್ಟ್ ಸಿಟಿಗೆ ನಿರ್ದೇಶಕರ ಆಯ್ಕೆಯನ್ನು ಮೇಯರ್ ಪರಮಾಧಿಕಾರಕ್ಕೆ ಬಿಡಲಾಗಿದೆ. ಹಾಗಾಗಿ ಅದರಂತೆ ಹಿರಿಯ ಸದಸ್ಯರಾದ ಭಾಸ್ಕರ ಮೊಯ್ಲಿಯವರನ್ನು ಪರಿಗಣಿಸಲಾಗಿತ್ತು. ನಿಯಮ ಪ್ರಕಾರ ಸ್ಮಾರ್ಟ್ ಸಿಟಿಯಲ್ಲಿ ಕಾಂಗ್ರೆಸ್‌ನವರಿಗೆ ಸ್ಥಾನ ನೀಡಬೇಕೆಂದು ಏನೂ ಇಲ್ಲ. ಬಹುಮತದ ಆಧಾರದ ಮೇಲೆ ನಿರ್ದೇಶಕರನ್ನು ಆಯ್ಕೆ ಮಾಡುವಂಥದ್ದು. ಅದು ಮೇಯರ್‌ಗೆ ಬಿಟ್ಟ ವಿಚಾರ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರಾಧಾಕೃಷ್ಣ, ರವಿಶಂಕರ ಮಿಜಾರು, ಕಸ್ತೂರಿ ಪಂಜ ಉಪಸ್ಥಿತರಿದ್ದರು.







