ಕಲ್ಲು ಗಣಿಗಾರಿಕೆ ಆರಂಭಿಸಲು ಸರಕಾರ ಅನುಮತಿ: ಕ್ರೆಡೈ ಮಂಗಳೂರು ಸ್ವಾಗತ

ಪುಷ್ಪರಾಜ್ ಜೈನ್
ಮಂಗಳೂರು, ಎ.2: ಸ್ಥಗಿತಗೊಂಡಿರುವ ಕಲ್ಲು ಗಣಿಗಾರಿಕೆ ಪುನರಾರಂಭಕ್ಕೆ ಅನುಮತಿ ನೀಡಲು ರಾಜ್ಯ ಸರಕಾರ ನಿರ್ಧರಿಸಿರುವುದನ್ನು ಕ್ರೆಡೈ ಮಂಗಳೂರು ಘಟಕವು ಸ್ವಾಗತಿಸಿದೆ.
ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿರುವುದರಿಂದ ಗಣಿಗಾರಿಕೆ, ನಿರ್ಮಾಣ ಕ್ಷೇತ್ರ ಸಂಪೂರ್ಣ ಸ್ಥಗಿತಗೊಂಡಿತ್ತು. ಸಾವಿರಾರು ಮಂದಿ ಕೆಲಸ ಇಲ್ಲದೆ, ನಿರುದ್ಯೋಗಿಗಳಾಗಿದ್ದರೆ, ಆರ್ಥಿಕ ಚಟುವಟಿಕೆ ಕುಸಿತಕ್ಕೂ ಕಾರಣವಾಗಿತ್ತು. ಅಭಿವೃದ್ಧಿ ಕಾಮಗಾರಿಗಳೂ ಸ್ಥಗಿತಗೊಂಡಿದ್ದವು. ಇದೀಗ ಸರಕಾರ ಮತ್ತೆ ಅವಕಾಶ ನೀಡಿರುವುದು ಸ್ವಾಗತಾರ್ಹ ಎಂದು ಕ್ರೆಡೈ ಮಂಗಳೂರು ಅಧ್ಯಕ್ಷ ಪುಷ್ಪರಾಜ್ ಜೈನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೋವಿಡ್-19ನಿಂದಾಗಿ ಈಗಾಗಲೇ ನಿರ್ಮಾಣ, ಕ್ವಾರಿ, ಕ್ರಷರ್, ಸಾರಿಗೆ ಉದ್ಯಮ ಕುಸಿದಿದೆ. ಉದ್ಯಮದಲ್ಲಿ ಚೇತರಿಕೆ ಕಂಡುಬರಲು ಆರಂಭವಾದಾಗ ನಾನಾ ಕಾರಣದಿಂದಾಗಿ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿ ಸರಕಾರ ಆದೇಶ ಹೊರಡಿಸಿತ್ತು. ಈ ಆದೇಶದಿಂದ ಆರ್ಥಿಕ ಚಟುವಟಿಕೆಯೇ ಸ್ಥಬ್ದಗೊಂಡಿತ್ತು. ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಮಳೆ ಪೂರ್ವದಲ್ಲಿ ಪೂರ್ಣಗೊಳಿಸಬೇಕಿದ್ದ ಸರಕಾರದ ಅಭಿವೃದ್ಧಿ ಯೋಜನೆಗಳು, ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಕರಾವಳಿಯ ಸಂಸದರು, ಶಾಸಕರ ಸಹಕಾರದಿಂದಾಗಿ ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸ್ಪಷ್ಟ ಚಿತ್ರಣ ನೀಡುವಲ್ಲಿ ಕ್ರೆಡೈ ಪದಾಧಿಕಾರಿಗಳು ಮತ್ತು ಕ್ವಾರಿ-ಕ್ರಷರ್ ಮಾಲಕರು ಸಂಘದ ಅಧ್ಯಕ್ಷ ಮನೋಜ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದು ಪುಷ್ಪರಾಜ್ ಜೈನ್ ತಿಳಿಸಿದ್ದಾರೆ.
ಗಣಿಗಾರಿಕೆ ಪುನಾರಂಭಕ್ಕೆ ಕಾರಣೀಭೂತರಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಮುರುಗೇಶ್ ನಿರಾನಿಯವರಿಗೆ, ಈ ಸಮಸ್ಯೆ ಬಗ್ಗೆ ಸರಕಾರದ ಗಮನಸೆಳೆಯುವಲ್ಲಿ ನೇತೃತ್ವ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್ ಸೇರಿದಂತೆ ಕರಾವಳಿಯ, ಸಚಿವರುಗಳಿಗೆ, ಎಲ್ಲ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಪುಷ್ಪರಾಜ್ ಜೈನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







