ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ನಿಲ್ಲಿಸಿ: ರಾಮಕೃಷ್ಣ ಶರ್ಮ

ಉಡುಪಿ, ಎ.2:ಕೃಷಿಯಲ್ಲಿ ಯೂರಿಯಾದಂತ ರಾಸಾಯನಿಕ ಗೊಬ್ಬರಗಳು ಆರಂಭದಲ್ಲಿ ಉತ್ತಮವೆಂದು ಕಂಡರೂ ಅಂತಿಮವಾಗಿ ಭೂಮಿಯ ಮತ್ತು ಬೆಳೆಗಳ ಫಲವತ್ತತೆಯನ್ನು ನಿಸ್ಸಾರಗೊಳಿಸುತ್ತವೆ. ಹೀಗಾಗಿ ರಾಸಾಯನಿಕಗಳ ಬಳಕೆಯನ್ನು ನಿಲ್ಲಿಸಿ, ಮಾಡುತ್ತಿರುವ ಕೃಷಿಪದ್ಧತಿಯಲ್ಲಿ ಕೆಲವೊಂದು ವೈಜ್ಞಾನಿಕ ಮತ್ತು ಸಾವಯವ ಕ್ರಮಗಳನ್ನು ಅನುಸರಿಸಿದರೆ ಭತ್ತವಾಗಲಿ, ಮಲ್ಲಿಗೆ ಕೃಷಿಯಾಗಲಿ ಖರ್ಚು ಕಡಿಮೆಯಾಗಿ ಉತ್ತಮ ಇಳುವರಿ ಬಂದು ಕೃಷಿಕರಿಗೆ ಲಾಭಕರವಾಗಲಿದೆ ಎಂದು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದ್ದಾರೆ.
ಜಿಲ್ಲಾ ಕೃಷಿಕ ಸಂಘ ಶಿರ್ವ ವಲಯ ಸಮಿತಿ ಮೂಡುಬೆಳ್ಳೆ ನೆಲ್ಲಿಕಟ್ಟೆ ತಾಬೈಲುನಲ್ಲಿ ಆಯೋಜಿಸಿದ್ದ ಮಲ್ಲಿಗೆ ಮತ್ತು ಭತ್ತ ಬೇಸಾಯ ಕೃಷಿ ಮಾಹಿತಿ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಮೂಡುಬೆಳ್ಳೆ ಲಾರೆನ್ಸ್ ಆಳ್ವಾ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಪೂಜಾರಿ, ಹಿರಿಯ ಕೃಷಿಕ ಮಹಿಳೆಗೆ ಮಲ್ಲಿಗೆ ಗಿಡ ನೀಡುವ ಮೂಲಕ ಉದ್ಘಾಟಿಸಿದರು.
ತಾಲೂಕು ಪಂಚಾಯತ್ ಸದಸ್ಯೆ ಸುಜಾತ ಸುವರ್ಣ ಮಾತನಾಡಿ, ನಾನು ಕೃಷಿಯಲ್ಲಿ ಒದ್ದಾಡಿದ್ದು ಸಾಕು, ನನ್ನ ಮಕ್ಕಳಿಗೆ ಕೃಷಿ ಬೇಡ. ಅವರು ಪರವೂರು, ವಿದೇಶದಲ್ಲಿ ದುಡಿಮೆಗೆ ತೊಡಗಲಿ ಎಂಬ ಮನೋಭಾವ ಹಿರಿಯ ಕೃಷಿಕರಲ್ಲಿ ಹೋಗಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷ ಜೆರಾಲ್ಡ್ ಪೆರ್ನಾಂಡಿಸ್ ಮಾತನಾಡಿ, ಹಿರಿಯರೇ ಮಕ್ಕಳನ್ನು ಉನ್ನತ ಹುದ್ದೆಗೇರಿಸಿ ತಾವು ಹೊಂಡಕ್ಕೆ ಬೀಳುತ್ತಿದ್ದಾರೆ. ಜೀವನದ ಕೊನೆಯ ದಿನಗಳನ್ನು ಒಂಟಿತನ ಇಲ್ಲವೇ ವೃದ್ದಾಶ್ರಮದಲ್ಲಿ ಕಳೆಯುವಂತಾಗಿದೆ ಎಂದರು. ತಾಪಂ ಸದಸ್ಯೆ ಬೆಳ್ಳೆ ರಜನಿ ಹೆಗ್ಡೆ, ಗ್ರಾಪಂ ಸದಸ್ಯರಾದ ರಾಜೇಂದ್ರ ಶೆಟ್ಟಿ, ಶಿಲ್ಪಾಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜು ಬಿ. ಶೆಟ್ಟಿ, ಜಯಾ ಪೈ, ನಥಾಲಿಯಾ ಆಳ್ವಾ, ಅಮ್ಮಣಿ ಶೆಟ್ಟಿ, ಪ್ರಮೀಳಾ ಶೆಟ್ಟಿ, ಜಲಜಾ, ದಯಾನಂದ ಶೆಟ್ಟಿ ಮೂಡುಮನೆ, ಐವನ್ ಡಿ. ಅಲ್ಮೇಡಾ, ಜಯ ಶೆಟ್ಟಿ ಗೋಳಿದಡಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿಪರ ಕೃಷಿಕ ರಾಘವೇಂದ್ರ ನಾಯಕ್ ಕಲ್ಲೊಟ್ಟು ಸ್ವಾಗತಿಸಿ, ವಂದಿಸಿದರು.







