ಉತ್ತರಪ್ರದೇಶ: ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆಂಬ ಶಂಕೆಯ ಮೇರೆಗೆ ದಲಿತ ಯುವಕನ ಮೇಲೆ ಭೀಕರ ಹಲ್ಲೆ
ನಾಲ್ವರನ್ನು ಬಂಧಿಸಿದ ಪೊಲೀಸರು

ಲಕಿಂಪುರ್ ಕೇರಿ: ತಮ್ಮ ಕುಟುಂಬದ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆಂಬ ಶಂಕೆಯ ಮೇರೆಗೆ 222ರ ಹರೆಯದ ದಲಿತ ಸಮುದಾಯಕ್ಕೆ ಸೇರಿದ ಯುವಕನೋರ್ವನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉತ್ತರಪ್ರದೇಶದ ಲಕಿಂಪುರ ಕೇರಿಯಲ್ಲಿ ನಡೆದಿದೆ. ಆತನ ಮರ್ಮಾಂಗಕ್ಕೆ ಕಬ್ಬಿಣದ ರಾಡ್ ತುರುಕಿಸಲಾಗಿದೆ ಎಂದೂ ಯುವಕನ ಕುಟುಂಬ ಸದಸ್ಯರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಪ್ರದೀಪ್ ಕುಮಾರ್ ವರ್ಮಾ ಈ ಆರೋಪವನ್ನು ನಿರಾಕರಿಸಿದ್ದಾರೆ ಎಂದು newsclick.in ವರದಿ ಮಾಡಿದೆ.
ಹಲ್ಲೆಗೊಳಗಾದ ಯುವಕನನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ರಾತ್ರಿ ದಲಿತ ಯುವಕನನ್ನು ಆರೋಪಿಗಳು ಥಳಿಸಿದ್ದು, ಆತನ ಖಾಸಗಿ ಭಾಗಗಳಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
"ಯುವಕನ ಸಹೋದರನ ದೂರಿನ ಮೇರೆಗೆ ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಜ್ಞಾನಪ್ರಕಾಶ್ ಹೇಳಿಕೆ ನೀಡಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 323 (ಸ್ವಯಂಪ್ರೇರಣೆಯಿಂದ ನೋವನ್ನುಂಟು ಮಾಡಿದ ಶಿಕ್ಷೆ) 506 (ಕ್ರಿಮಿನಲ್ ಬೆದರಿಕೆ), ಮತ್ತು ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.