ಜಮ್ಮು-ಕಾಶ್ಮೀರ: ಮೂವರು ಉಗ್ರರ ಹತ್ಯೆ

ಶ್ರೀನಗರ, ಎ.2: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಗುರುವಾರ ಶ್ರೀನಗರದಲ್ಲಿ ಬಿಜೆಪಿ ಮುಖಂಡನ ಮನೆ ಮೇಲೆ ದಾಳಿ ನಡೆಸಿದ ಇಬ್ಬರು ಉಗ್ರರೂ ಮೃತಪಟ್ಟವರಲ್ಲಿ ಸೇರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪುಲ್ವಾಮಾ ಜಿಲ್ಲೆಯ ಕಾಕಪೋರದಲ್ಲಿ 3 ಮಹಡಿಯ ಮನೆಯೊಂದರಲ್ಲಿದ್ದ ಉಗ್ರರನ್ನು ಸುತ್ತುವರಿದ ಭದ್ರತಾ ಪಡೆಗಳು, ಶರಣಾಗುವಂತೆ ಸೂಚಿಸಿದರು. ಆದರೆ ಉಗ್ರರು ಗುಂಡಿನ ದಾಳಿ ನಡೆಸಿದಾಗ ಸೇನಾಪಡೆ, ಸಿಆರ್‌ಪಿಎಫ್ ಮತ್ತು ಪೊಲೀಸ್ ತಂಡ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಮೃತಪಟ್ಟವರಲ್ಲಿ ಬಿಜೆಪಿ ಮುಖಂಡ ಅನ್ವರ್ ಅಹ್ಮದ್‌ರ ನೌಗಾಂವ್‌ನಲ್ಲಿನ ಮನೆಯ ಮೇಲೆ ದಾಳಿ ನಡೆಸಿದ ಇಬ್ಬರು ಉಗ್ರರೂ ಸೇರಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶ್ರೀನಗರದ ಹೊರಭಾಗದ ನೌಗಾಂವ್‌ನಲ್ಲಿರುವ ಅನ್ವರ್ ಅಹ್ಮದ್ ನಿವಾಸದ ಮೇಲೆ ಗುರುವಾರ ಉಗ್ರರು ನಡೆಸಿದ ದಾಳಿಯಲ್ಲಿ ಓರ್ವ ಪೊಲೀಸ್ ಮೃತಪಟ್ಟಿದ್ದು ದಾಳಿ ನಡೆಸಿದ ಉಗ್ರರು ಅವರ ರೈಫಲ್‌ನೊಂದಿಗೆ ಪರಾರಿಯಾಗಿದ್ದರು. ಶುಕ್ರವಾರ ಮೃತಪಟ್ಟ ಉಗ್ರರ ಬಳಿ ಈ ರೈಫಲ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.