ವಲಸೆ ನಾಯಕ ಸಿದ್ದರಾಮಯ್ಯ- ಮಹಾನಾಯಕ ಡಿಕೆಶಿ ನಡುವೆ ಯುದ್ಧ ತಾರಕಕ್ಕೇರಿದೆ: ನಳಿನ್ ಕಟೀಲು

ಬೆಂಗಳೂರು, ಎ. 2: ‘ದಲಿತ ವಿರೋಧಿ ಖರ್ಗೆ, ದಕ್ಷಿಣ ಭಾರತದ ರಾಜಕೀಯದ ಬಗ್ಗೆ ಮಾತನಾಡುವ ನೀವು ಕಲ್ಯಾಣ ಕರ್ನಾಟಕಕ್ಕೆ ಏನು ಮಾಡಿದ್ದೀರಿ? ದಲಿತರ ಬಗ್ಗೆ ಕಾಳಜಿ ಇದ್ದರೆ ಚಿತ್ತಾಪುರ ಮೀಸಲು ಕ್ಷೇತ್ರದಲ್ಲಿ ಮುಂದಿನ ಬಾರಿ ನಿಮ್ಮ ಕುಟುಂಬದ ಹೊರತಾದವರಿಗೆ ಅವಕಾಶ ನೀಡಿ. ಸಾಕಷ್ಟು ಅಧಿಕಾರ ಅನುಭವಿಸಿದ ಮೇಲೂ ಮೀಸಲು ಕ್ಷೇತ್ರವನ್ನು ನಿಮ್ಮ ಮಗನಿಗೆ ಧಾರೆ ಎರೆಯುವುದೇಕೆ?' ಎಂದು ಬಿಜೆಪಿ ಪ್ರಶ್ನಿಸಿದೆ.
ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾಕ್ ಕಟೀಲ್, ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ನೀವು ನಡೆಸಿದ ದುರಾಚಾರ, ಕುಟುಂಬ ಪೋಷಣೆಯ ಫಲವಾಗಿ ಸ್ವ ಕ್ಷೇತ್ರವನ್ನೂ ಉಳಿಸಿಕೊಳ್ಳುವುದಕ್ಕೂ ನಿಮ್ಮಿಂದ ಸಾಧ್ಯವಾಗಲಿಲ್ಲ. ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರವೇಶಿಸುವುದನ್ನು ತಡೆಯುವ ಕನಸು ಕಾಣುತ್ತಿರುವುದು ಹಾಸ್ಯಾಸ್ಪದ. ಅಂಗಳ ಅಳೆಯುಲು ಅಸಮರ್ಥರಾದವರು ಆಕಾಶ ಅಳೆಯಲು ಮುಂದಾದಂತಾಯಿತು' ಎಂದು ಲೇವಡಿ ಮಾಡಿದ್ದಾರೆ.
‘ಕಲ್ಯಾಣ ಕರ್ನಾಟಕದ ವಿರೋಧಿ ಖರ್ಗೆ ಅವರೇ, ತಮಿಳುನಾಡಿನಲ್ಲಿ ಈಗಾಗಲೇ ಬಿಜೆಪಿ ಬೆಂಬಲಿತ ಸರಕಾರವಿದೆ. ಪುದುಚೇರಿಯಲ್ಲಿ ಈ ಬಾರಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಪುದುಚೇರಿಯಲ್ಲಿ ಕಾಂಗ್ರೆಸ್ ಶಾಶ್ವತವಾಗಿ ಬಾಗಿಲು ಮುಚ್ಚಲಿದೆ. ನಿಮ್ಮ ಪಕ್ಷವನ್ನು ಮೊದಲು ಉಳಿಸಿಕೊಳ್ಳಿ, ಮಾನವರಾರೂ ಚಿರಂಜೀವಿಗಳಲ್ಲ' ಎಂದು ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ನಮ್ಮದು ಒಂದು ಕುಟುಂಬದ ಹಿಡಿತದಲ್ಲಿರುವ ಪಕ್ಷವಲ್ಲ, ವಲಸೆ ನಾಯಕ ಸಿದ್ದರಾಮಯ್ಯ ಹಾಗೂ ಮಹಾನಾಯಕ ಡಿ.ಕೆ.ಶಿವಕುಮಾರ್ ನಡುವೆ ಯುದ್ಧ ತಾರಕಕ್ಕೇರಿದೆ. ದಲಿತ ಶಾಸಕ ಅಖಂಡ ಅವರು ಪಕ್ಷದ ನೆರವು ಕೇಳಿದರೂ ಅವರ ವಿರುದ್ಧವೇ ನೋಟಿಸ್ ನೀಡುವ ಬೆದರಿಕೆವೊಡ್ಡಿದಿರಿ. ಅಖಂಡಗೊಂದು ನ್ಯಾಯ ಸೌಮ್ಯಾರೆಡ್ಡಿ, ಸಂಗಮೇಶ್ ಅವರಿಗೊಂದು ನ್ಯಾಯ'
-ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ







