ಪುದುಚೇರಿ ಬಿಜೆಪಿ ಆಧಾರ್ ದುರ್ಬಳಕೆ ಮಾಡಿ ಮತದಾರರ ವಿವರ ಪಡೆದಿರುವ ಆರೋಪ ‘ನಂಬಲರ್ಹ’: ಹೈಕೋರ್ಟ್

ಹೊಸದಿಲ್ಲಿ, ಎ. 2: ಚುನಾವಣಾ ಪ್ರಚಾರದ ಸಂದರ್ಭ ಬಿಜೆಪಿಯ ಪುದುಚೇರಿ ಘಟಕ ಆಧಾರ್ ಕಾರ್ಡ್ ದತ್ತಾಂಶವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್)ಯ ವಿಚಾರಣೆ ನಡೆಸಿದ ಮದ್ರಾಸ್ ಉಚ್ಚ ನ್ಯಾಯಾಲಯ, ಪಕ್ಷ ಹೇಗೆ ನಡೆದುಕೊಂಡಿದೆ ಎಂಬುದರಲ್ಲಿ ‘ನೀತಿ ಸಂಹಿತೆಯ ಗಂಭೀರ ಉಲ್ಲಂಘನೆ’ ಕಂಡು ಬಂದಿದೆ ಎಂದಿದೆ. ಬಿಜೆಪಿ ಪ್ರಚಾರಕ್ಕೆ ಸಂಬಂಧಿಸಿದ ಎಸ್‌ಎಂಎಸ್ ಸಂದೇಶವನ್ನು ಆಧಾರ್ ಜೋಡಣೆ ಮಾಡಿದ ಮೊಬೈಲ್ ಸಂಖ್ಯೆಗೆ ರವಾನಿಸಿದೆ. ಆದರೆ, ಇತರ ಮೊಬೈಲ್ ಸಂಖ್ಯೆಗೆ ರವಾನಿಸಿಲ್ಲ ಎಂದು ಡೆಮಾಕ್ರೆಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ದೂರುದಾರ ಆನಂದ್ ಹೇಳಿದ್ದಾರೆ.
ಇದು ನಂಬಲರ್ಹ ಆರೋಪ ಎಂಬುದನ್ನು ನ್ಯಾಯಾಲಯ ತಿಳಿದುಕೊಡಿದೆ. ಈ ಬಳಕೆದಾರರ ವಿವರಗಳನ್ನು ಸಮರ್ಪಕವಾಗಿ ರಕ್ಷಿಸಲಾಗಿಲ್ಲ ಯಾಕೆ ಎಂಬ ಬಗ್ಗೆ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಉತ್ತರ ನೀಡುವಂತೆ ಅದು ಹೇಳಿದೆ. ಮುಂಬರುವ ವಿಧಾನಸಭೆ ಚುನಾವಣೆಗಳಿಗಾಗಿ ಪುದುಚೇರಿಯಲ್ಲಿ ಹೇಗೆ ಪ್ರಚಾರ ನಡೆಸಲಾಗಿದೆ ಎಂಬುದರಲ್ಲಿ ಬಿಜೆಪಿಯ 6ನೇ ಪ್ರತಿವಾದಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ ಎಂದು ಮುಖ್ಯ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ಹಾಗೂ ಸೆಂಥಿಲ್ ಕುಮಾರ್ ರಾಮಮೂರ್ತಿ ನೇತೃತ್ವದ ನ್ಯಾಯಪೀಠ ಗುರುವಾರ ಹೇಳಿದೆ.
ಎಪ್ರಿಲ್ 6ರಂದು ನಡೆಯಲಿರುವ ಚುನಾವಣೆಯ ಪ್ರಚಾರ ನಡೆಸಲು ಪುದುಚೇರಿಯ ಮತದಾರರ ಆಧಾರ್ ದತ್ತಾಂಶ, ನಿರ್ದಿಷ್ಟವಾಗಿ ಮೊಬೈಲ್ ಸಂಖ್ಯೆಯನ್ನು ನೀಡಿರುವ ಆರೋಪವನ್ನು ಯುಐಡಿಎಐ ನಿರಾಕರಿಸಿದೆ. ಪಕ್ಷ ಯಾವುದೇ ಮೊಬೈಲ್ ದತ್ತಾಂಶವನ್ನು ಕಳವುಗೈದಿಲ್ಲ ಎಂದು ಬಿಜೆಪಿಯ ಪುದುಚೇರಿ ಘಟಕವನ್ನು ಪ್ರತಿನಿಧಿಸುತ್ತಿರುವ ವಕೀಲರು ಹೇಳಿದ್ದಾರೆ. ಇದನ್ನು ಪಕ್ಷದ ಕಾರ್ಯಕರ್ತರು ದೀರ್ಘಾವಧಿಯಲ್ಲಿ ಸಂಗ್ರಹಿಸಿದ್ದಾರೆ. ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಬೂತ್ ಮಟ್ಟದ ವಾಟ್ಸ್ ಆ್ಯಪ್ ಗುಂಪಿಗೆ ಸೇರಲು ಲಿಂಕ್ ಅನ್ನು ಮತದಾರರಿಗೆ ಎಸ್‌ಎಂಎಸ್ ಮೂಲಕ ಕಳುಹಿಸುವ ಸೃಜನಶೀಲ ಮಾದರಿಯನ್ನು ಆಯ್ದುಕೊಳ್ಳಲಾಗಿದೆ ಎಂದು ಬಿಜೆಪಿ ಹೇಳಿದೆ.







