ಕೆ.ಎಸ್.ಸಿ.ಎ. ಕ್ರಿಕೆಟ್: ಧಾರವಾಡ ವಲಯದ ವಿರುದ್ಧ ಮಂಗಳೂರು ಮೇಲುಗೈ
ಉಡುಪಿ, ಎ.2: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆದಿರುವ 16 ವರ್ಷದೊಳಗಿನವರ ಅಂತರ ವಲಯ ಕ್ರಿಕೆಟ್ ಪಂದ್ಯಾಟದಲ್ಲಿ ಮಂಗಳೂರು ವಲಯವು ಪ್ರಬಲ ಧಾರವಾಡ ತಂಡದ ವಿರುದ್ಧ ಪ್ರಥಮ ಇನಿಂಗ್ಸ್‌ನ 83 ರನ್‌ಗಳ ಲೀಡ್ ಆಧಾರದಲ್ಲಿ ಮೇಲುಗೈ ಸಾಧಿಸಿ ಮೂರು ಅಂಕಗಳನ್ನು ಪಡೆಯಿತು.
ಎರಡು ದಿನಗಳ ಕಾಲ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮಂಗಳೂರು ತಂಡ 75.2 ಓವರುಗಳಲ್ಲಿ 168 ರನ್ ಗಳಿಸಿ ಆಲೌಟಾಯಿತು. ಆರಂಭಿಕ ಕುಸಿತ ಕಂಡ ಮಂಗಳೂರು ತಂಡಕ್ಕೆ ನಾಯಕ ಆಶೀಷ್ ಅರ್ಧ ಶತಕ ಗಳಿಸಿ ಆಧರಿಸಿದರೆ, ಪ್ರಥಮ್ 34, ಸನಿತ್ ಶೆಟ್ಟಿ 24 ರನ್‌ಗಳ ಕೊಡುಗೆ ನೀಡಿದರು. ಧಾರವಾಡ ತಂಡದ ಧ್ರುವ್ ಉತ್ತಮ ಬೌಲಿಂಗ್ ನಡೆಸಿ 20 ರನ್‌ಗಳಿಗೆ 6 ವಿಕೆಟ್ ಪಡೆದರು. ಶ್ರೇಯಸ್ 44ಕ್ಕೆ 2 ವಿಕೆಟ್ ಪಡೆದರು.
ಮಂಗಳೂರಿನ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಧಾರವಾಡ ತಂಡ ವಿಕೆಟ್ ಕಳೆದು ಕೊಳ್ಳದೇ 37 ರನ್‌ಗಳನ್ನು ಗಳಿಸಿತ್ತಾದರೂ ಆಶೀಷ್ (5 ರನ್‌ಗೆ 3 ವಿ) ಮತ್ತು ಅಮೃತ್ (27 ರನ್‌ಗೆ 3) ಅವರ ಬೌಲಿಂಗ್ ದಾಳಿಗೆ ಬಲಿಯಾಗಿ 85 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು.
ಮಂಗಳೂರು ತಂಡ ಎರಡನೆ ಇನಿಂಗ್ಸ್‌ನಲ್ಲಿ 45 ಓವರುಗಳಲ್ಲಿ 3 ವಿಕೆಟ್‌ಗೆ 128 ರನ್ ಗಳಿಸಿದ್ದಾಗ ಪಂದ್ಯ ಡ್ರಾ ಕಂಡಿತು. ಮಂಗಳೂರು ತಂಡದ ವಿಕಾಸ್ ಎರ್ಮಾಳ್ ಅಜೇಯ 59, ಶ್ರವಣ್ 45 ರನ್ ಹೊಡೆದರು.







