ಎ. 3ರಿಂದ ಸಮಸ್ತ ಮದ್ರಸ ಪಬ್ಲಿಕ್ ಪರೀಕ್ಷೆ ಆರಂಭ
ಮಂಗಳೂರು, ಎ.2: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಪರೀಕ್ಷಾ ಬೋರ್ಡಿನ ಅಧೀನದಲ್ಲಿ ನಡೆಯುವ 5, 7, 10 ಮತ್ತು ಪ್ಲಸ್ ಟು ತರಗತಿಗಳ ಮದ್ರಸ ಪಬ್ಲಿಕ್ ಪರೀಕ್ಷೆಗಳು ಎ.3ರಿಂದ ಆರಂಭವಾಗಲಿದೆ.
ಕೋವಿಡ್-19 ನಿಯಮಗಳನ್ನು ಪಾಲಿಸಿ ದೇಶದಾದ್ಯಂತ 7,219 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ದ.ಕ.ಜಿಲ್ಲೆಯ ಆರು ಡಿವಿಷನ್ ಗಳಲ್ಲಿ 397 ಕೇಂದ್ರಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಲಾಗಿದೆ. ಜಿಲ್ಲೆಯಲ್ಲಿ 8,049 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಮಾಹಿತಿ ಶಿಬಿರ: ಮಂಗಳೂರು ಡಿವಿಷನ್ ವ್ಯಾಪ್ತಿಯ ಪರೀಕ್ಷೆಯ ಮೇಲ್ವಿಚಾರಕರಿಗೆ ಮಾಹಿತಿ ಶಿಬಿರ ಮತ್ತು ಪರೀಕ್ಷಾ ಪರಿಕರಗಳ ವಿತರಣೆಯು ಅಝಹರಿಯ ಕೇಂದ್ರ ಮದ್ರಸದಲ್ಲಿ ದ.ಕ.ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಸಮಿತಿಯ ಅಧ್ಯಕ್ಷ ಐ. ಮೊಯಿದಿನಬ್ಬ ಹಾಜಿಯ ಅಧ್ಯಕ್ಷತೆಯಲ್ಲಿ ನಡೆಯಿತು.
ವಿಭಾಗಿಯ ಪರೀಕ್ಷಾ ಅಧೀಕ್ಷಕ ಮುಫತ್ತಿಸ್ ಉಮರ್ ದಾರಿಮಿ ಸಾಲ್ಮರ ಪರೀಕ್ಷೆಯ ಸಂಪೂರ್ಣ ಮಾಹಿತಿ ನೀಡಿದರು. ಜಿಲ್ಲಾ ಜಂಇಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ಲತೀಫ್ ದಾರಿಮಿ ರೆಂಜಾಡಿ ಪರಿಕರಗಳ ವಿತರಣೆಗೆ ಚಾಲನೆ ನೀಡಿದರು.
ಮಂಗಳೂರು ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ರಿಯಾಝ್ ಹಾಜಿ ಬಂದರ್, ಅಡ್ಯಾರ್ ಕಣ್ಣೂರ್ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್, ಮಂಗಳೂರು ರೇಂಜ ಜಂಇಯ್ಯತುಲ್ ಅಧ್ಯಕ್ಷ ಸಲೀಂ ಅರ್ಷದಿ ದೆಮ್ಮಲೆ, ದೇರಳಕಟ್ಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಮುಸ್ಲಿಯಾರ್ ಕಲಾಯಿ, ಅಡ್ಯಾರ್ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಶ್ರಫ್ ಅಝಹರಿ, ಅಝ್ಹರಿಯಾ ಕೇಂದ್ರ ಮದ್ರಸ ಪ್ರಧಾನ ಅಧ್ಯಾಪಕ ಬಶೀರ್ ಮದನಿ ಮತ್ತಿತರರು ಪಾಲ್ಗೊಂಡಿದ್ದರು.
ಪಟ್ಟೋರಿ ಅಬ್ದುಲ್ ಅಝಿಝ್ ಫೈಝಿ ದುಆಗೈದರು. ಮಂಗಳೂರು ರೇಂಜ್ ಪರೀಕ್ಷಾ ಬೋರ್ಡ್ ಅಧ್ಯಕ್ಷ ಮುಹಮ್ಮದ್ ಅಲಿ ಫೈಝಿ ಸ್ವಾಗತಿಸಿ ದರು. ಮುಸ್ತಫಾ ಫೈಝಿ ಕಿನ್ಯ ವಂದಿಸಿದರು.







