ತುಳು ಭಾಷಾ ಸಾಹಿತ್ಯ, ಸಂಸ್ಕೃತಿ ಉಳಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ- ಸಾಧ್ವಿ ಮಾತಾನಂದಮಯಿ
ಪುತ್ತೂರಿನಲ್ಲಿ ಪ್ರಥಮ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನ

ಪುತ್ತೂರು: ತುಳು ಭಾಷೆ ಮತ್ತು ಸಂಸ್ಕೃತಿಯು ಪುರಾತನವಾಗಿದ್ದು, ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ತುಳುನಾಡಿನ ಪ್ರತಿಯೊಬ್ಬರ ಆಸಕ್ತಿ ಮತ್ತು ಸಹಕಾರ ಅಗತ್ಯವಾಗಿದೆ. ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಳನವು ತುಳು ಭಾಷೆ 8ನೇ ಪರಿಚ್ಚೇದಕ್ಕೆ ಸೇರ್ಪಡೆಯಾಗುವ ತುಳು ಭಾಷಿಗರ ದೊಡ್ಡ ಕನಸು ನನಸಾಗಲು ಸಹಕಾರಿಯಾಗಲಿದೆ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನ ಸಾಧ್ವಿ ಮಾತಾನಂದಮಯಿ ಹೇಳಿದರು.
ಅವರು ಶುಕ್ರವಾರ ಪೂವರಿ ಪತ್ರಿಕಾ ಬಳಗ ಪುತ್ತೂರು ಇದರ ಆಶ್ರಯದಲ್ಲಿ ಒಡಿಯೂರು ಗುರುದೇವ ಸ್ವಾಮಿಜಿ ಅವರ ಷಷ್ಠ್ಯಬ್ಧಿ ಸಂಭ್ರಮ ತಾಲೂಕು ಸಮಿತಿಯ ಸಹಯೋಗದೊಂದಿಗೆ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ `ಪ್ರಥಮ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನ' ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ತುಳು ಸಾಹಿತ್ಯ, ಸಂಸ್ಕೃತಿ ಉಳಿಯಬೇಕಾದರೆ ತುಳು ಸಾಹಿತ್ಯಗಳು ಪಡೆದುಕೊಂಡು ಓದುವ ಮೂಲಕ ಪ್ರೋತ್ಸಾಹಿಸಬೇಕು. ತುಳುನಾಡಿನ ಹೆಮ್ಮೆಯನ್ನು ಇಮ್ಮಡಿಗೊಳಿಸಬೇಕು. ತುಳುವಿನಲ್ಲಿ ಸುಮಾರು 73 ಪತ್ರಿಕೆಗಳು ಪ್ರಾರಂಭಗೊಂಡಿದ್ದವು. ಪತ್ರಿಕೆಗಳು ಉಳಿಯಬೇಕಾದರೆ ಜನರ ಆಸಕ್ತಿ ಅಗತ್ಯ. ಪತ್ರಿಕೆಗಳಿಂದ ತುಳು ಸಾಹಿತ್ಯ ಸಂಸ್ಕೃತಿಗಳು ಉಳಿಯ ಸಾಧ್ಯ ಎಂದರು.
ಪೂವರಿ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ್ ಅವರು ಪ್ರತಿಯೊಬ್ಬರೂ ತುಳು ಭಾಷೆ ಕಲಿತುಕೊಂಡು ಅದನ್ನು ಬಳಸಿದಾಗ ಮಾತ್ರ ತುಳು ಪತ್ರಿಕೆಗಳು ಬೆಳೆಯಬಹುದು. ಪತ್ರಿಕೆಗಳಿಗೆ ಲೇಖನಗಳು ಬರಬಹುದು. ಓದುವವರ ಸಂಖ್ಯೆಯೂ ಅಧಿಕವಾಗಿ ಪತ್ರಿಕೆಗಳು ಬೆಳೆಯಬಹುದು. 1-10ತರಗತಿ ತನಕ ತುಳು ಪಠ್ಯ ರಚನೆಯಾದ ಸಂದರ್ಭ ದಲ್ಲಿ ಉಡುಪಿ ಹಾಗೂ ದ.ಕ ಜಿಲ್ಲೆಯ ಹಲವು ಶಿಕ್ಷಕರು ಸಹಕರಿಸಿದ್ದರೂ ಶಾಲೆಗಳಲ್ಲಿ ಸರಿಯಾಗಿ ಅನುಷ್ಟಾನ ಕಾರ್ಯ ನಡೆದಿಲ್ಲ. ಪುತ್ತೂರು ತಾಲೂಕಿನ ಸುಮಾರು 60 ಶಾಲೆಗಳಲ್ಲಿ ತುಳು ಕಲಿಸುವ ಕಾರ್ಯ ನಡೆದಿದ್ದು, ಪ್ರಥಮ ಸ್ಥಾನ ಪಡೆದಿದೆ ಎಂದು ಹೇಳಿದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ ತಾಲೂಕು ಸಮಿತಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ಮಾತನಾಡಿ, ಪತ್ರಿಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಅಭಿವೃದ್ಧಿ, ಆರ್ಥಿಕ ಬೆಳವಣಿಗೆಗೆ ಪತ್ರಿಕೆಗಳು ಬಹಳಷ್ಟು ಜವಾಬ್ದಾರಿಯುತ ಸ್ಥಾನದಲ್ಲಿದೆ. ಕಳೆದ ಹಲವು ವರ್ಷಗಳಿಂದ ಪೂವರಿ ತುಳು ಪತ್ರಿಕೆ ಮೂಲಕ ವಿಜಯಕುಮಾರ್ ಅವರು ತುಳುವಿನ ಮಹತ್ವವನ್ನು ತಿಳಿಸುವ ಕಾರ್ಯವನ್ನು ಮಾಡಿರುವುದು ಶ್ಲಾಘನೀಯವಾಗಿದೆ. ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮವು ಆ.8ರಂದು ನಡೆಯಲಿದ್ದು, ಇದಕ್ಕೆ ಪೂರಕ ವಾಗಿ ಪುತ್ತೂರಿನಲ್ಲಿ 59 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನವು 32ನೇ ಕಾರ್ಯಕ್ರಮವಾಗಿ ಆಯೋಜಿಸಲಾಗಿದೆ. ಮೇ.2ರಂದು ತುಳು ಸಮ್ಮೇಳನವು ಬಹಳಷ್ಟು ಅದ್ದೂರಿಯಾಗಿ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಸ್ವಾಮಿಜಿಯವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.
ಒಡಿಯೂರು ಗುರುದೇವಾ ಸೇವಾ ಬಳಗದ ಗೌರವಾಧ್ಯಕ್ಷ ದೇವಪ್ಪ ನೋಂಡಾ, ಪೂವರಿ ಪತ್ರಿಕೆ ಸಂಪಾದಕ ವಿಜಯ ಕುಮಾರ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಪ್ರಾಸ್ತಾವಿಕ ಮಾತುಗಳನ್ನಾ ಡಿದರು. ಶಿಕ್ಷಕಿ ದೇವಕಿ ಸ್ವಾಗತಿಸಿದರು. ನಗರ ಸಭಾ ಮಾಜಿ ಸದಸ್ಯ ರಾಜೇಶ್ ಬನ್ನೂರು ವಂದಿಸಿದರು.
ತುಳು ಭಜನೆ:
ಈ ಸಂದರ್ಭದಲ್ಲಿ ತುಳು ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ನ್ಯಾಯವಾದಿ ಮಹೇಶ್ ಕಜೆ ತುಳು ಭಜನಾ ಕಾರ್ಯಕ್ರಮ ಉದ್ಘಾಟಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ ಮುಳಿಯ ಉಪಸ್ಥಿತರಿದ್ದರು. ಒಡಿಯೂರು ವಜ್ರಮಾತಾ ಮಹಿಳಾ ಭಜನಾ ಘಟಕದ ರಂಗದೀಪ ಭಜನಾ ತಂಡದಿಂದ ತುಳು ಭಜನೆ ನಡೆಯಿತು.







