ಪಡುಬಿದ್ರಿ: ಎ. 10, 11ರಂದು ಮಹಾನಾಯಕ ಜೈ ಭೀಮ್ ಟ್ರೋಫಿ ಕ್ರಿಕೆಟ್ ಪಂದ್ಯಾಟ
ಪಡುಬಿದ್ರಿ: ಅಂಬೇಡ್ಕರ್ ಯವ ಸೇನೆ ಕಾಪು ತಾಲೂಕು ಸಮಿತಿ ಆಶ್ರಯದಲ್ಲಿ ಎ. 10 ಮತ್ತು 11 ರಂದು ಪಡುಬಿದ್ರಿ ಬೋರ್ಡು ಶಾಲಾ ಮೈದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ರಾಜ್ಯಮಟ್ಟದ ಮಹಾನಾಯಕ ಜೈ ಭೀಮ್ ಟ್ರೋಫಿ 2021 ಕ್ರಿಕೆಟ್ ಪಂದ್ಯಾಟದ ಟ್ರೋಫಿ ನಡೆಯಲಿದೆ ಎಂದು ಅಂಬೇಡ್ಕರ್ ಯುವಸೇನೆ ಕಾಪು ತಾಲೂಕು ಸಮಿತಿ ಅಧ್ಯಕ್ಷ ಲೋಕೇಶ್ ಹೇಳಿದರು.
ಪಡುಬಿದ್ರಿ ಶ್ರೀ ಬ್ರಹ್ಮ ಮುಗ್ಗೇರ್ಕಳ ದೈವಸ್ಥಾನ ಆವರಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಪಂದ್ಯಾಟದ ಮಾಹಿತಿ ನೀಡಿದರು.
ಎಸ್‍ಸಿ ಮತ್ತು ಎಸ್‍ಟಿ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ಓರ್ವ ಉತ್ತಮ ಕ್ರೀಡಾಪಟು ವನ್ನಾಗಿ ಮಾಡುವುದು ಸಂಘಟನೆ ಗುರಿಯಾಗಿದೆ ಎಂದ ಅವರು, ರಾಜ್ಯದ 25 ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಳ್ಳಲಿದ್ದು, ವಿಜೇತ ತಂಡಕ್ಕೆ ಪ್ರಥಮ ರೂ.50,555 ನಗದು ಮತ್ತು ಶಾಶ್ವತ ಫಲಕ ಹಾಗೂ ದ್ವಿತೀಯ ಸ್ಥಾನಿ ತಂಡಕ್ಕೆ ರೂ.33,333 ನಗದು ಮತ್ತು ಶಾಶ್ವತ ಫಲಕ ಹಾಗೂ ಪ್ರತಿಭೆಗನುಗುಣವಾಗಿ ವೈಯಿಕ್ತಿಕ ಬಹುಮಾನಗಳನ್ನು ವಿತರಿಸಲಾಗುವುದು. ಪಂದ್ಯಾಟದಲ್ಲಿ ಉಳಿಕೆಯಾದ ಮೊತ್ತದಲ್ಲಿ ಸಮಾಜದಲ್ಲಿನ 6 ಜನ ಅನಾರೋಗ್ಯ ಪೀಡಿತರಿಗೆ ನೆರವು ನೀಡಲಾಗುವುದು ಎಂದು ನುಡಿದರು.
ಕ್ರೀಡಾಕೂಟಗಳಲ್ಲಿ ಜಾತಿ ಮತ ಬೇಧವಿಲ್ಲ, ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ಅವರನ್ನು ಬೆಳೆಸುವಲ್ಲಿ ಪ್ರ್ರೋತ್ಸಾಹ ನೀಡಬೇಕು. ಪಡುಬಿದ್ರಿ ಫ್ರೆಂಡ್ಸ್ ತಂಡವು ಪರಿಶಿಷ್ಟ ಜಾತಿ ಮತ್ತು ಪಂಗಡದ ಸಾಕಷ್ಟು ಪ್ರತಿಭೆಗಳಿಗೆ ಬೆಳೆಯಲು ಅವಕಾಶ ನೀಡಿದೆ ಎಂದು ಉಡುಪಿ ಜಿಲ್ಲಾ ಟೆನ್ನಿಸ್‍ಬಾಲ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಶರತ್ ಶೆಟ್ಟಿ ಹೇಳಿದರು.
ಟ್ರೋಫಿ ಅನಾವರಣ ಕಾರ್ಯಕ್ರಮವನ್ನು ಗುರಿಕರ ವಿಠಲ ಪಿ ಉದ್ಘಾಟಿಸಿದರು. ಉದ್ಯಮಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಟ್ರೋಫಿ ಅನಾವರಣಗೊಳಿಸಿದರು. ಸಂಘಟನೆ ಪ್ರಮುಖರಾದ ಕೃಷ್ಣ ಬಂಗೇರ, ಸುರೇಶ್, ಪ್ರಸನ್ನ ಕುಮಾರ್, ಮನೋಹರ್, ರವೀಂದ್ರ ಕಲ್ಲಟ್ಟೆ, ರಾಜೀವಿ, ಪ್ರಮೀಳ, ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.







