ಎಸ್ಸಿ-ಎಸ್ಟಿ ದೌರ್ಜನ್ಯ ಪ್ರಕರಣಗಳಲ್ಲಿ ಮೇಲ್ಮನವಿಗೆ ನಿರಾಸಕ್ತಿ: ವಿವರಣೆ ಕೇಳಿದ ಹೈಕೋರ್ಟ್

ಬೆಂಗಳೂರು, ಎ.2: ಪರಿಶಿಷ್ಟ ಜಾತಿ, ಪಂಗಡಗಳ(ಮೇಲಿನ ದೌರ್ಜನ್ಯ ತಡೆ) ಕಾಯ್ದೆ ಅಡಿ ದಾಖಲಾದ ಪ್ರಕರಣಗಳಲ್ಲಿ ಖುಲಾಸೆಯಾದ ಆರೋಪಿಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರಾಸಕ್ತಿ ತೋರುತ್ತಿರುವ ಕುರಿತು ವಿವರಣೆ ನೀಡುವಂತೆ ಹೈಕೋರ್ಟ್ ಅಭಿಯೋಜನಾ ಇಲಾಖೆ ನಿರ್ದೇಶಕರಿಗೆ ನಿರ್ದೇಶನ ನೀಡಿದೆ.
ರಾಜ್ಯದಲ್ಲಿ ಎಸ್‍ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ವಕೀಲರ ವಾದ ಆಲಿಸಿದ ನ್ಯಾಯಪೀಠ, ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡ ನಂತರ ಮೇಲ್ಮನವಿ ಸಲ್ಲಿಸಲು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ಬಗ್ಗೆ ವಿವರಣೆ ನೀಡುವಂತೆ ಪ್ರಾಸಿಕ್ಯೂಷನ್ ಇಲಾಖೆಗೆ ನಿರ್ದೇಶಿಸಿ, ವಿಚಾರಣೆಯನ್ನು ಎ.16ಕ್ಕೆ ಮುಂದೂಡಿತು.
2019ರಲ್ಲಿ ಸಮುದಾಯದ ಜನರ ಮೇಲೆ ನಡೆದಿದ್ದ ದೌರ್ಜನ್ಯಗಳಿಗೆ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ದಾಖಲಾಗಿದ್ದ 1097 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗಿದ್ದರು.
ಈ ಪೈಕಿ 39 ಪ್ರಕರಣಗಳಲ್ಲಿ ಮಾತ್ರ ಮೇಲ್ಮನವಿ ಸಲ್ಲಿಸುವಂತೆ ಅಭಿಯೋಜನಾ ಇಲಾಖೆ ಉಪ ನಿರ್ದೇಶಕರು ಶಿಫಾರಸು ಮಾಡಿದ್ದರು. 2020ರಲ್ಲಿ 650 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗಿದ್ದು, 46 ಪ್ರಕರಣಗಳಲ್ಲಿ ಮಾತ್ರ ಮೇಲ್ಮನವಿ ಸಲ್ಲಿಸಲು ಶಿಫಾರಸು ಮಾಡಲಾಗಿದೆ. ಈ ವರದಿಯನ್ನು ಗಮನಿಸಿದ ಪೀಠ, ವಿವರಣೆ ನೀಡುವಂತೆ ಪ್ರಾಸಿಕ್ಯೂಷನ್ ಇಲಾಖೆ ನಿರ್ದೇಶಕರಿಗೆ ನಿರ್ದೇಶನ ನೀಡಿದೆ.







