2016-17ನೆ ಸಾಲಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೇವೆ ಕಡ್ಡಾಯವಿಲ್ಲ: ಹೈಕೋರ್ಟ್

ಬೆಂಗಳೂರು, ಎ.2: ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಗಳಲ್ಲಿ 2016-17 ಹಾಗೂ 2017-18ನೆ ಶೈಕ್ಷಣಿಕ ಸಾಲಿಗೆ ಪ್ರವೇಶ ಪಡೆದುಕೊಂಡ ಅಭ್ಯರ್ಥಿಗಳಿಗೆ ಒಂದು ವರ್ಷದ ಸರಕಾರಿ ಮತ್ತು ಗ್ರಾಮೀಣ ಸೇವೆ ಕಡ್ಡಾಯವಾಗಿರುವ ‘ಕರ್ನಾಟಕ ವೈದ್ಯಕೀಯ ಕೋರ್ಸ್‍ಗಳನ್ನು ಪೂರ್ಣಗೊಳಿಸಿದ ಕಡ್ಡಾಯ ಸೇವಾ ಅಧಿನಿಯಮ-2012’ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಇದೇ ವೇಳೆ, 2018-19ನೆ ಶೈಕ್ಷಣಿಕ ವರ್ಷ ಹಾಗೂ ನಂತರದಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶ ಪಡೆದು ಒಂದು ವರ್ಷದ ಸರಕಾರಿ ಮತ್ತು ಗ್ರಾಮೀಣ ಸೇವೆ ಬಗ್ಗೆ ಬಾಂಡ್ ಬರೆದುಕೊಡುವ ಅಭ್ಯರ್ಥಿಗಳಿಗೆ 2012ರ ಅಧಿನಿಯಮ ಅನ್ವಯವಾಗಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
‘ಕರ್ನಾಟಕ ವೈದ್ಯಕೀಯ ಕೋರ್ಸ್ ಗಳನ್ನು ಪೂರ್ಣಗೊಳಿಸಿದ ಕಡ್ಡಾಯ ಸೇವಾ ಅಧಿನಿಯಮ-2012’ರ ಸಿಂಧುತ್ವ ಪ್ರಶ್ನಿಸಿ ಹಾಗೂ ಈ ಅಧಿನಿಯಮ ತಮಗೆ ಅನ್ವಯಿಸುವುದಿಲ್ಲ ಎಂದು 2016-17, 2017-18ನೆ ಶೈಕ್ಷಣಿಕ ವರ್ಷದ 456 ಹಾಗೂ 2018-19ನೆ ಶೈಕ್ಷಣಿಕ ವರ್ಷದ 59 ಅಭ್ಯರ್ಥಿಗಳು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ.ಆರ್.ದೇವದಾಸ್ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ. ಪೀಠ ತನ್ನ ತೀರ್ಪಿನಲ್ಲಿ ಕಾಯ್ದೆಯ ಸಿಂಧುತ್ವದ ಬಗ್ಗೆ ಈಗಾಗಲೇ ಏಕಸದಸ್ಯ ಮತ್ತು ವಿಭಾಗೀಯ ಪೀಠದಲ್ಲಿ ವಿಸ್ತೃತ ವಿಚಾರಣೆ ನಡೆದಿದೆ. ಅಂತಿಮವಾಗಿ ಹೈಕೋರ್ಟ್ ಕಾಯ್ದೆಯ ಸಿಂಧುತ್ವವನ್ನು ಎತ್ತಿಹಿಡಿದಿದೆ. ಹೀಗಾಗಿ, ಸಿಂಧುತ್ವದ ಬಗ್ಗೆ ಆದೇಶ ಹೊರಡಿಸಲು ಬರುವುದಿಲ್ಲ. ಸೀಮಿತ ಶೈಕ್ಷಣಿಕ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ವಿಚಾರವಾಗಿ ಉಂಟಾಗಿರುವ ತಾಂತ್ರಿಕ ಗೊಂದಲಕ್ಕೆ ಸ್ಪಷ್ಟನೆ ನೀಡುವುದಷ್ಟೇ ಈಗಿರುವ ವಿವಾದ. ಅದನ್ನಷ್ಟೇ ಪರಿಗಣಿಸಲಾಗುತ್ತಿದೆ.
2018-19ನೆ ಶೈಕ್ಷಣಿಕ ವರ್ಷ ಹಾಗೂ ನಂತರದಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶ ಪಡೆದುಕೊಂಡವರಿಗೆ ಒಂದು ವರ್ಷದ ಸರಕಾರಿ ಮತ್ತು ಗ್ರಾಮೀಣ ಸೇವೆ ಕಡ್ಡಾಯ ನಿಯಮಗಳು ಅನ್ವಯಿಸುತ್ತವೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.







