ವಿದ್ಯಾರ್ಥಿನಿಯರಿಗೆ ನ್ಯಾಪ್‍ಕಿನ್ ನೀಡಲು ಸರಕಾರದ ನಿರ್ಲಕ್ಷ್ಯ: ವರದಿಗೆ ಹೈಕೋರ್ಟ್ ಸೂಚನೆ

ಬೆಂಗಳೂರು, ಎ.2: ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಮತ್ತು ಅಗತ್ಯ ಸ್ಯಾನಿಟರಿ ನ್ಯಾಪ್‍ಕಿನ್ ಒದಗಿಸುವ ಕುರಿತು ಕೈಗೊಂಡಿರುವ ಕ್ರಮಗಳ ಕುರಿತು ಎ.16ರೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಶಾಲೆಗಳ ಸ್ಥಿತಿಗತಿ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾ. ಬಿ. ವಿ.ನಾಗರತ್ನ ನೇತೃತ್ವದ ವಿಭಾಗೀಯ ಪೀಠ, ಸರಕಾರಕ್ಕೆ ಈ ನಿರ್ದೇಶನ ನೀಡಿದೆ.
ಶುಚಿ ಯೋಜನೆ ಅಡಿ 2021-22ನೆ ಸಾಲಿನಲ್ಲಿ ಸ್ಯಾನಿಟರಿ ನ್ಯಾಪ್‍ಕಿನ್/ ಪ್ಯಾಡ್ ಖರೀದಿಗೆ ಯಾವಾಗ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂಬ ಕುರಿತು ವರದಿಯಲ್ಲಿ ವಿವರ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿರುವ 10 ರಿಂದ 19 ವರ್ಷದೊಳಗಿನ 17,06,933 ಬಾಲಕಿಯರಿಗೆ ಸರಕಾರ ಮೊದಲು ನ್ಯಾಪ್‍ಕಿನ್ ನೀಡಿತ್ತು. ಆದರೆ ಆರ್ಥಿಕ ಸಂಕಷ್ಟದ ಕಾರಣಕ್ಕೆ 2019-20, 2020-21ನೆ ಸಾಲಿನಲ್ಲಿ ಇದಕ್ಕೆ ಹಣಕಾಸು ನಿಗದಿ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದೆ.
ಪ್ರತ್ಯೇಕ ಶೌಚಾಲಯ, ಸ್ಯಾನಿಟರಿ ನ್ಯಾಪ್‍ಕಿನ್ ನೀಡುವುದು ಸಬಲೀಕರಣದ ಸಂಕೇತವಾಗಿದ್ದು, ಮಹಿಳೆಯರ ಸಬಲೀಕರಣ ಮಾಡುವ ಉದ್ದೇಶ ಸರಕಾರಕ್ಕೆ ಇದ್ದರೆ ಮೊದಲು ಈ ಸೌಕರ್ಯಗಳನ್ನು ಒದಗಿಸಿ ಎಂದು ಹೈಕೋರ್ಟ್ ಹೇಳಿದೆ.







