ಶ್ರೇಯಸ್ ಅಯ್ಯರ್‌ಗೆ ಎ.8ರಂದು ಶಸ್ತ್ರಚಿಕಿತ್ಸೆ

ಮುಂಬೈ:ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಏಕದಿನ ಹಾಗೂ ಸಂಪೂರ್ಣ ಐಪಿಎಲ್ ಟೂರ್ನಿಯಿಂದ ಹೊರಗುಳಿಯಲು ಕಾರಣವಾಗಿದ್ದ ಭುಜ ನೋವಿಗೆ ಸಂಬಂಧಿಸಿ ಭಾರತದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಎಪ್ರಿಲ್ 8ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಮಾರ್ಚ್ 23ರಂದು ಪುಣೆಯಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಜಾನಿ ಬೈರ್‌ಸ್ಟೋವ್ ಬಾರಿಸಿದ ಚೆಂಡನ್ನು ತಡೆಯುವ ಪ್ರಯತ್ನದಲ್ಲಿದ್ದಾಗ 26ರ ಹರೆಯದ ಐಯ್ಯರ್ ಭುಜಕ್ಕೆ ಗಂಭೀರ ಪೆಟ್ಟಾಗಿತ್ತು.
ಶ್ರೇಯಸ್ ಅಯ್ಯರ್ ಅವರು ತನ್ನ ಭುಜನೋವಿಗಾಗಿ ಎಪ್ರಿಲ್ 8ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಬಲ್ಲಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.
‘‘ನನಗಿದು ಹೆಚ್ಚಿನ ಹಿನ್ನಡೆಯಾಗಿದ್ದರೂ ನಾನು ಬಲಿಷ್ಠವಾಗಿ ಶೀಘ್ರವೇ ಮರಳುತ್ತೇನೆ. ನಿಮ್ಮ ಸಂದೇಶಗಳನ್ನು ಓದುತ್ತಿದ್ದೇನೆ. ನಿಮ್ಮ ಪ್ರೀತಿ ಹಾಗೂ ಬೆಂಬಲದ ಸಾಗರದಲ್ಲಿ ಮುಳುಗಿದ್ದೇನೆ. ಎಲ್ಲರಿಗೂ ನನ್ನ ಹೃದಯಾಂತರಾಳದ ಧನ್ಯವಾದಗಳು’’ ಎಂದು ಅಯ್ಯರ್ ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ಯುಎಇನಲ್ಲಿ ನಡೆದಿದ್ದ 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಯ್ಯರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಎಪ್ರಿಲ್ 9ರಿಂದ ಆರಂಭವಾಗಲಿರುವ ಈ ವರ್ಷದ ಐಪಿಎಲ್‌ನಲ್ಲಿ ಡೆಲ್ಲಿ ನಾಯಕನಾಗಿ ಅಯ್ಯರ್ ಬದಲಿಗೆ ರಿಷಭ್ ಪಂತ್ ಆಯ್ಕೆಯಾಗಿದ್ದಾರೆ.