ಮಂಗಳೂರು: ‘ಕ್ಯಾಪ್‌ಮ್ಯಾನ್’ ಎಂ.ಜಿ. ರಹೀಂ ನಿಧನ

ಮಂಗಳೂರು, ಎ.3: ಕಾಸರಗೋಡು ಮೂಲದ ಚಂದ್ರಗಿರಿ ನಿವಾಸಿ, ಚಿತ್ರ ನಿರ್ದೇಶಕ, ಕ್ಯಾಸೆಟ್ ನಿರ್ಮಾಪಕ, ಸಂಗೀತ ಪ್ರೇಮಿ, ‘ಕ್ಯಾಪ್‌ಮ್ಯಾನ್ ಮೀಡಿಯಾ ಮಂಗಳೂರು’ ಇದರ ಮಾಲಕ ಎಂ.ಜಿ. ರಹೀಂ (63) ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿರುವ ತನ್ನ ಪುತ್ರನ ಮನೆಯಲ್ಲಿ ಅಸೌಖ್ಯದಿಂದ ನಿಧನರಾದರು.
ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
‘ಅಬ್ಬ’ ಚಲನಚಿತ್ರದ ನಿರ್ದೇಶಕರಾಗಿದ್ದ ಅವರು ಬ್ಯಾರಿ ಮತ್ತು ತುಳು ಆಡಿಯೋ ಕ್ಯಾಸೆಟ್‌ಗಳ ನಿರ್ಮಾಪಕರಾಗಿ ಪ್ರಸಿದ್ಧರಾಗಿದ್ದರು. ಅನೇಕ ಆಡಿಯೋ ಮತ್ತು ವೀಡಿಯೋ ಕ್ಯಾಸೆಟ್‌ಗಳನ್ನು ಹೊರ ತಂದಿದ್ದರು. ಸಂಗೀತ ಪ್ರೇಮಿಯಾಗಿದ್ದ ಅವರು ಹೊಸ ಹೊಸ ಪ್ರಯೋಗಗಳ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದರು. ಕೆಲವು ಬ್ಯಾರಿ ಕೃತಿಗಳನ್ನು ಪ್ರಕಟಿಸಿ ಪ್ರಕಾಶಕರಾಗಿ ಗುರುತಿಸಲ್ಪಟ್ಟಿದ್ದರು.
‘ಅರಳ್‌ಂಡ್ ಮನಸ್’ ಪ್ರಥಮ ತುಳು ವೀಡಿಯೋ ಆಲ್ಬಮ್ ಹೊರತಂದಿದ್ದ ಅವರು ಕೊಡವ ಭಾಷೆಯಲ್ಲಿ ‘ಕೊಡವತ್ತಿರ ಮನಸ್’ ಕ್ಯಾಸೆಟ್ ಹೊರತಂದಿದ್ದರು. ‘ಸುರ್ಮತ್ತೊ ಕಣ್ಣ್’, ‘ಸಾವುಂಞಾಕರೊ ಸಾಲೆ’ ಇತ್ಯಾದಿ ಕ್ಯಾಸೆಟ್ ಹೊರತಂದಿದ್ದ ಅವರು ಬ್ಯಾರಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹಬ್ಬದ ಸಂದರ್ಭ ಬ್ಯಾರಿ ಭಾಷೆಯಲ್ಲಿ ವಿಶೇಷ ಟಿವಿ ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆದಿದ್ದರು.
ಶುಕ್ರವಾರ ಸಂಜೆ ಕಾಸರಗೋಡಿನಲ್ಲಿ ಅವರ ದಫನ ಕ್ರಿಯೆ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.







