ಇಬ್ಬರು ಪತ್ರಕರ್ತರಿಗೆ ಬೆದರಿಕೆಯೊಡ್ಡಿದ್ದ ಅಸ್ಸಾಂ ಸಚಿವರಿಗೆ ಪೊಲೀಸರ ಬುಲಾವ್

ಸಾಂದರ್ಭಿಕ ಚಿತ್ರ
ಮೋರಿಗಾಂವ್,ಎ.3: ಇಬ್ಬರು ಪತ್ರಕರ್ತರಿಗೆ ಗಂಭೀರ ಪರಿಣಾಮಗಳ ಬೆದರಿಕೆಯನ್ನೊಡ್ಡಿದ್ದ ಅಸ್ಸಾಮಿನ ಸಹಾಯಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಪಿಯೂಷ್ ಹಝಾರಿಕಾ ಅವರಿಗೆ ತಮ್ಮೆದುರು ಹಾಜರಾಗುವಂತೆ ನೋಟಿಸ್ ಹೊರಡಿಸಿರುವ ಪೊಲೀಸರು,ಅವರ ಮತ್ತು ಪತ್ರಕರ್ತರ ಕರೆ ದಾಖಲೆಗಳನ್ನು ಪರೀಕ್ಷೆಗಾಗಿ ಗುವಾಹಟಿಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
ಅಸ್ಸಾಮಿ ಸುದ್ದಿವಾಹಿನಿಗಳ ಪತ್ರಕರ್ತರಾದ ನಝರುಲ್ ಇಸ್ಲಾಂ ಮತ್ತು ತುಳಸಿ ಮಂತಾ ಅವರು ಜಗಿರೋಡ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಎರಡು ಎಫ್ಐಆರ್ಗಳನ್ನು ವಿಲೀನಗೊಳಿಸಿರುವ ಪೊಲೀಸರು ಹಝಾರಿಕಾ ವಿರುದ್ಧ ಐಪಿಸಿಯ ವಿವಿಧ ಕಲಮ್ಗಳಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಪತ್ರಕರ್ತರಿಗೆ ಪೊಲೀಸ್ ರಕ್ಷಣೆಯನ್ನು ಒದಗಿಸಲಾಗಿದೆ.
ಹಝಾರಿಕಾ ಜಗಿರೋಡ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು,ಗುರುವಾರ ಇಲ್ಲಿ ಮತದಾನ ನಡೆದಿದೆ. ತನ್ನ ಪತ್ನಿಯ ವಿವಾದಾತ್ಮಕ ಚುನಾವಣಾ ಪ್ರಚಾರ ಭಾಷಣವನ್ನು ವರದಿ ಮಾಡಿದ್ದಕ್ಕಾಗಿ ಹಝಾರಿಕಾ ಇಬ್ಬರು ಪತ್ರಕರ್ತರಿಗೆ ಬೆದರಿಕೆಯೊಡ್ಡಿದ್ದಾರೆಂದು ಆರೋಪಿಸಲಾಗಿದೆ.
ಹಝಾರಿಕಾ ರವಿವಾರ ಪೊಲೀಸ್ ಠಾಣೆಗೆ ಬಂದು ತನ್ನ ಹೇಳಿಕೆಯನ್ನು ದಾಖಲಿಸುವುದಾಗಿ ತಿಳಿಸಿದ್ದಾರೆ ಎಂದು ಮೋರಿಗಾಂವ್ ಎಸ್ಪಿ ನಂದಾಸಿಂಗ್ ಬೋರ್ಕಲಾ ಹೇಳಿದರು.