ಆಕಸ್ಮಿಕ ಬೆಂಕಿ: ಬಾಲಕ ಸೇರಿ ಇಬ್ಬರು ಸಜೀವ ದಹನ

ದೀಪಕ್ / ತನ್ವಿತ್
ನಾಗಮಂಗಲ, ಎ.3: ಆಕಸ್ಮಿಕ ಬೆಂಕಿಯಿಂದ ನಿದ್ರಿಸುತ್ತಿದ್ದ 5 ವರ್ಷದ ಬಾಲಕ ಸೇರಿ ಇಬ್ಬರು ಸಜೀವ ದಹನವಾಗಿ, ಓರ್ವ ತೀವ್ರ ಗಾಯಗೊಂಡಿರುವ ಘಟನೆ ತಾಲೂಕಿನ ಅಗಚಹಳ್ಳಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ದೀಪಕ್(33) ಹಾಗೂ ಬಾಲಕ ತನ್ವಿತ್ ಘಟನೆಯಲ್ಲಿ ಬೆಂಕಿಗಾಹುತಿಯಾಗಿದ್ದು, ತನ್ವಿತ್ ತಂದೆ ಭರತ್(45) ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದಾರೆ.
ತನ್ನ ಮಗನ ಜತೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಭರತ್ ನಾಗಮಂಗಲ ತಾಲೂಕಿನ ಅಗಚಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ಪೈಂಟರ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಭರತ್ನ ಸಂಬಂಧಿಯಾದ ಹಾಸನದ ದೀಪಕ್ ಎಂಬವರು ಶುಕ್ರವಾರ ಭರತ್ನ ಮನೆಗೆ ಬಂದಿದ್ದು, ರಾತ್ರಿ ಭರತ್, ಮಗ, ದೀಪಕ್ ಮಲಗಿದ್ದಾಗ ಈ ಘಟನೆ ಸಂಭವಿಸಿದೆ.
ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಸ್ಥಳಕ್ಕೆ ಹೋಗಿ ನೋಡಿದಾಗ ದೀಪಕ್ ಮತ್ತು ತನ್ವಿತ್ ದಹನವಾಗಿದ್ದರು. ಸುಟ್ಟಗಾಯಗಳಿಂದ ನರಳುತ್ತಿದ್ದ ಭರತ್ನನ್ನು ಬೆಳ್ಳೂರು ಕ್ರಾಸ್ನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು ಭರತ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿದರು. ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಗಳ ದೇಹದ ಶವಪರೀಕ್ಷೆ ನಡೆಸಲಾಯಿತು.
ಮನೆ ಮಾಲಕ ದಿನೇಶ್ ದೂರಿನನ್ವಯ ಬೆಳ್ಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.








