ನಂಬಿ ನಾರಾಯಣನ್ ಅಕ್ರಮ ಬಂಧನ ಕುರಿತು ಸುಪ್ರೀಂ ಕೋರ್ಟ್ಗೆ ತನಿಖಾ ವರದಿ ಸಲ್ಲಿಕೆ
ಇಸ್ರೋ ಬೇಹುಗಾರಿಕೆ ಪ್ರಕರಣ

photo: twitter(@akhilkumar022)
ಹೊಸದಿಲ್ಲಿ,ಎ.3: ಬೇಹುಗಾರಿಕೆ ಪ್ರಕರಣದಲ್ಲಿ ಅಕ್ರಮ ಬಂಧನಕ್ಕೊಳಗಾಗಿದ್ದ ಇಸ್ರೋ ವಿಜ್ಞಾನಿ ಡಾ.ನಂಬಿ ನಾರಾಯಣನ್ ಅವರಿಗೆ ತೀವ್ರ ಕಿರುಕುಳ ಮತ್ತು ಅಗಾಧ ನೋವನ್ನುಂಟು ಮಾಡಿದ್ದ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ನೇಮಕಗೊಳಿಸಿದ್ದ ಉನ್ನತ ಮಟ್ಟದ ತನಿಖಾ ಸಮಿತಿಯು ಇತ್ತೀಚಿಗೆ ತನ್ನ ವರದಿಯನ್ನು ಸಲ್ಲಿಸಿದೆ.
2018,ಸೆ.14ರಂದು ತನ್ನ ಮಾಜಿ ನ್ಯಾಯಾಧೀಶ ಡಿ.ಕೆ.ಜೈನ್ ಅವರ ನೇತೃತ್ವದ ಮೂವರು ಸದಸ್ಯರ ಸಮಿತಿಯನ್ನು ನೇಮಕಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯವು,ನಾರಾಯಣನ್ ತೀವ್ರ ತೇಜೋವಧೆಗೊಳಗಾಗುವಂತೆ ಮಾಡಿದ್ದಕ್ಕಾಗಿ ಅವರಿಗೆ 50 ಲ.ರೂ.ಗಳ ಪರಿಹಾರವನ್ನು ಪಾವತಿಸುವಂತೆ ಕೇರಳ ಸರಕಾರಕ್ಕೆ ಆದೇಶಿಸಿತ್ತು. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವಿದ್ದಾಗ 1994ರ ಬೇಹುಗಾರಿಕೆ ಪ್ರಕರಣದಲ್ಲಿ ನಾರಾಯಣನ್ರನ್ನು ಬಂಧಿಸಲಾಗಿತ್ತು.
ಕೇರಳದ ಆಗಿನ ಹಿರಿಯ ಪೊಲೀಸ್ ಅಧಿಕಾರಿಗಳು ನಾರಾಯಣನ್ ಅವರ ಅಕ್ರಮ ಬಂಧನಕ್ಕೆ ಕಾರಣಕರ್ತರಾಗಿದ್ದರು ಎಂದು ಸಿಬಿಐ ತನ್ನ ತನಿಖಾ ವರದಿಯಲ್ಲಿ ತಿಳಿಸಿತ್ತು.
ಇಬ್ಬರು ವಿಜ್ಞಾನಿಗಳು ಮತ್ತು ಇಬ್ಬರು ಮಾಲ್ದೀವ್ಸ್ ಮಹಿಳೆಯರು ಸೇರಿದಂತೆ ಇತರ ನಾಲ್ವರು ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಕೆಲವು ರಹಸ್ಯ ದಾಖಲೆಗಳನ್ನು ವಿದೇಶಗಳಿಗೆ ಹಸ್ತಾಂತರಿಸಿದ್ದರು ಎಂಬ ಆರೋಪಗಳಿಗೆ ಪ್ರಕರಣವು ಸಂಬಂಧಿಸಿತ್ತು.
ಸಿಬಿಐನಿಂದ ಕ್ಲೀನ್ ಚಿಟ್ ಪಡೆದಿದ್ದ ನಾರಾಯಣನ್ (79) ಕೇರಳ ಪೊಲೀಸರು ತನ್ನನ್ನು ಕಪೋಲಕಲ್ಪಿತ ಪ್ರಕರಣದಲ್ಲಿ ಸಿಲುಕಿಸಿದ್ದಾರೆ,1994ರ ಪ್ರಕರಣದಲ್ಲಿ ತಾನು ಕದ್ದು ಮಾರಾಟ ಮಾಡಿದ್ದೆ ಎಂದು ಆರೋಪಿಸಲಾಗಿದ್ದ ತಂತ್ರಜ್ಞಾನವು ಆ ಸಮಯದಲ್ಲಿ ಅಸ್ತಿತ್ವದಲ್ಲಿಯೇ ಇರಲಿಲ್ಲ ಎಂದು ಪ್ರತಿಪಾದಿಸಿದ್ದರು. ನಾರಾಯಣನ್ ಸುಮಾರು 50 ದಿನಗಳ ಕಾಲ ಬಂಧನದಲ್ಲಿದ್ದರು.
ನಾರಾಯಣನ್ ಅಕ್ರಮ ಬಂಧನಕ್ಕೆ ಆಗಿನ ವಿಶೇಷ ತನಿಖಾ ತಂಡ (ಸಿಟ್)ದ ಮುಖ್ಯಸ್ಥರಾಗಿದ್ದ ಮಾಜಿ ಡಿಜಿಪಿ ಸಿಬಿ ಮ್ಯಾಥ್ಯೂಸ್,ನಿವೃತ್ತ ಎಸ್ಪಿಗಳಾದ ಕೆ.ಕೆ.ಜೋಷುವಾ ಮತ್ತು ಎಸ್.ವಿಜಯನ್ ಹಾಗೂ ಗುಪ್ತಚರ ಸಂಸ್ಥೆಯ ಆಗಿನ ಉಪ ನಿರ್ದೇಶಕ ಆರ್.ಬಿ.ಶ್ರೀಕುಮಾರ್ ಅವರು ಹೊಣೆಗಾರರು ಎಂದು ಸಿಬಿಐ ತನಿಖಾ ವರದಿ ಸ್ಪಷ್ಟಪಡಿಸಿತ್ತಾದರೂ ಕೇರಳ ಉಚ್ಚ ನ್ಯಾಯಾಲಯವು ಈ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮದ ಅಗತ್ಯವಿಲ್ಲ ಎಂದು ತನ್ನ ತೀರ್ಪಿನಲ್ಲಿ ಹೇಳಿತ್ತು. ಇದನ್ನು ಪ್ರಶ್ನಿಸಿ ನಾರಾಯಣನ್ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.







