ಮುಂಬೈಯ ‘ಬೆಸ್ಟ್’ ಸಿಬ್ಬಂದಿಗೆ ನಾಣ್ಯಗಳಲ್ಲಿ ವೇತನ ಪಾವತಿ

ಮುಂಬೈ, ಎ.3: ಮುಂಬೈಯಲ್ಲಿ ಸರಕಾರಿ ಸಾರಿಗೆ ಬಸ್ಸುಗಳನ್ನು ನಿರ್ವಹಿಸುತ್ತಿರುವ ‘ಬೃಹನ್ಮುಂಬಯಿ ಇಲೆಕ್ಟ್ರಿಕ್ ಸಪ್ಲೈ ಆ್ಯಂಡ್ ಟ್ರಾನ್ಸ್‌ಪೋರ್ಟ್’(ಬೆಸ್ಟ್)ನ ಸಿಬ್ಬಂದಿಗಳಿಗೆ ಕಳೆದ ಕೆಲವು ತಿಂಗಳಿಂದ ನಾಣ್ಯಗಳಲ್ಲಿ ವೇತನ ಪಾವತಿಯಾಗುತ್ತಿದೆ. ಇದಕ್ಕೆ ಕಾರಣ ಬ್ಯಾಂಕ್‌ಗೆ ನಾಣ್ಯ ಜಮೆ ಮಾಡುವಲ್ಲಿ ಎದುರಾಗಿರುವ ಸಮಸ್ಯೆ.
‘ಬೆಸ್ಟ್’ಗೆ ಸೇರಿದ ಸುಮಾರು 4000 ಬಸ್‌ಗಳು ಮುಂಬೈ ಮಹಾನಗರದಲ್ಲಿ ದಿನಾ ಓಡಾಡುತ್ತಿವೆ. ಜತೆಗೆ ಮಹಾನಗರದ ಸುಮಾರು 10 ಲಕ್ಷ ಗ್ರಾಹಕರಿಗೆ ವಿದ್ಯುತ್ ಪೂರೈಸುತ್ತಿದೆ. ಬಸ್ ಪ್ರಯಾಣಿಕರಿಂದ ದಿನಾ ಬೃಹತ್ ಪ್ರಮಾಣದಲ್ಲಿ ಟಿಕೆಟ್ ಹಣ ನಾಣ್ಯದ ರೂಪದಲ್ಲಿ ಸಂಗ್ರಹವಾಗುತ್ತದೆ. ನಗರದ ಪ್ರಮುಖ ಖಾಸಗಿ ಬ್ಯಾಂಕ್ ಈ ನಾಣ್ಯಗಳನ್ನು ಸುಮಾರು 150 ಸಂಗ್ರಹ ಕೇಂದ್ರಗಳಿಂದ ಸಂಗ್ರಹಿಸುತ್ತಿತ್ತು. ಆದರೆ ಇತ್ತೀಚೆಗೆ ಬ್ಯಾಂಕ್‌ನೊಂದಿಗಿನ ಒಪ್ಪಂದದ ಅವಧಿ ಮುಕ್ತಾಯವಾಗಿದೆ. ಈಗ ದಿನಾ ಸಂಗ್ರಹ ಕೇಂದ್ರಗಳಿಂದ ನಾಣ್ಯಗಳನ್ನು ಸಂಗ್ರಹಿಸಲು ಯಾವ ಬ್ಯಾಂಕ್‌ಗಳೂ ಒಪ್ಪುತ್ತಿಲ್ಲ. ಹೀಗಾಗಿ ಬೃಹತ್ ಮೊತ್ತದ ನಾಣ್ಯ ‘ಬೆಸ್ಟ್’ ಬಳಿ ಸಂಗ್ರಹವಾಗಿದೆ. ಇದನ್ನೇ ಸಿಬ್ಬಂದಿಗಳಿಗೆ ವೇತನದ ಸಂದರ್ಭ ನೀಡಲಾಗುತ್ತಿದೆ ಎಂದು ಸಿಬ್ಬಂದಿಗಳು ಹೇಳಿದ್ದಾರೆ.
ನಮಗೆ ತಿಂಗಳ ಸಂಬಳದಲ್ಲಿ ಸುಮಾರು 10,000 ರೂ.ಗಳನ್ನು ನಾಣ್ಯಗಳ ರೂಪದಲ್ಲಿ(2, 5 ಮತ್ತು 10 ರೂ. ಮುಖಬೆಲೆಯ ನಾಣ್ಯ) ನೀಡಲಾಗುತ್ತಿದೆ. ಉಳಿದ ಮೊತ್ತವನ್ನು ನಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ. ಪ್ರತೀ ತಿಂಗಳು ಇಷ್ಟು ಮೊತ್ತದ ನಾಣ್ಯಗಳ ವಿಲೇವಾರಿ ನಮಗೂ ಸಮಸ್ಯೆಯಾಗಿದೆ ಎಂದು ಸಂಸ್ಥೆಯ ಸಿಬ್ಬಂದಿಗಳು ಹೇಳಿದ್ದಾರೆ. ಹಲವು ಸಿಬಂದಿಗಳು ಅಂಬರನಾಥ್, ಬದ್ಲಾಪುರ, ಪನ್ವೇಲ್ ಅಥವಾ ವಿರಾರ್-ವಸೈ ಮುಂತಾದ ನಗರಗಳಲ್ಲಿ ವಾಸಿಸುತ್ತಿದ್ದು ಲೋಕಲ್ ರೈಲುಗಳ ಮೂಲಕ ಪ್ರಯಾಣಿಸುತ್ತಾರೆ. ಇಷ್ಟೊಂದು ಮೊತ್ತದ ನಾಣ್ಯವನ್ನು ಜತೆಗೆ ಕೊಂಡೊಯ್ಯುವುದು ಅಪಾಯಕಾರಿ. ನಾಣ್ಯಗಳಲ್ಲಿ ವೇತನ ಪಾವತಿಯಿಂದ ಹಲವು ಸಿಬ್ಬಂದಿಗಳಿಗೆ ಸಾಲದ ಇಎಂಐ ಪಾವತಿಗೆ ಸಮಸ್ಯೆಯಾಗಿದೆ’ ಎಂದು ‘ಬೆಸ್ಟ್’ ಸಮಿತಿಯ ಹಿರಿಯ ಸದಸ್ಯ ಸುನಿಲ್ ಗಣಾಚಾರ್ಯ ಹೇಳಿದ್ದಾರೆ. ಅಂಗಡಿಯವರಿಗೆ ನಾಣ್ಯ ನೀಡಿ ನೋಟುಗಳನ್ನು ಪಡೆಯುವ ಮೂಲಕ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುತ್ತಿದ್ದೇವೆ ಎಂದು ‘ಬೆಸ್ಟ್’ ಕಂಡಕ್ಟರ್ ಹೇಳಿದ್ದಾರೆ.
ಸಿಬ್ಬಂದಿಗಳ ಸಮಸ್ಯೆಯ ಬಗ್ಗೆ ಆಡಳಿತ ವರ್ಗದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ‘ಬೆಸ್ಟ್’ ಕಾರ್ಮಿಕರ ಯೂನಿಯನ್ ಮುಖಂಡ ಶಶಾಂಕ್ ರೈ ಹೇಳಿದ್ದಾರೆ. ನಾಣ್ಯಗಳನ್ನು ದಿನಾ ಸಂಗ್ರಹಿಸಿ ಖಾತೆಗೆ ಜಮೆ ಮಾಡುವ ಕುರಿತು ಶೀಘ್ರವೇ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ‘ಬೆಸ್ಟ್’ ವಕ್ತಾರ ಮನೋಜ್ ವರಾಡೆ ಪ್ರತಿಕ್ರಿಯಿಸಿದ್ದಾರೆ.







