ತುರ್ತು ಸಭೆ ಕರೆಯಲು ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ, ಹಿರಿಯ ನ್ಯಾಯವಾದಿ ವಿವೇಕಾನಂದ ಪನಿಯಾಲ ಆಗ್ರಹ
ವಿವಿ ಉಪಕುಲಪತಿ ನೇಮಕಾತಿಗಾಗಿ ಲಂಚ ಪ್ರಕರಣ
ಮಂಗಳೂರು : ರಾಯಚೂರು ವಿವಿಯ ಉಪಕುಲಪತಿ ಹುದ್ದೆಯ ನೇಮಕಾತಿಗಾಗಿ ಮಂಗಳೂರು ವಿವಿಯ ಪ್ರೊಫೆಸರ್ ಒಬ್ಬರು 17 ಲಕ್ಷ ರೂ.ಗಳನ್ನು ಆರೋಪಿ ಪ್ರಸಾದ್ ಅತ್ತಾವರ್‌ಗೆ ಪಾವತಿಸಿದ ಘಟನೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಹಾಗೂ ಹಿರಿಯ ನ್ಯಾಯವಾದಿ ವಿವೇಕಾನಂದ ಪನಿಯಾಲ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಅಕ್ರಮವಾಗಿ ನೇಮಕಾತಿಗೊಳ್ಳಲು ಹಣ ನೀಡಿರುವುದು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಒಬ್ಬರಿಗೆ ಅನುಚಿತವಾದ ನಡವಳಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.
ನೈತಿಕ ಅಧಃಪತನದ ಈ ಕೃತ್ಯವು ವಿಶ್ವವಿದ್ಯಾನಿಲಯದ ಘನತೆ ಹಾಗೂ ಪ್ರತಿಷ್ಠೆಯನ್ನು ಕುಂದಿಸಿದೆ ಎಂದವರು ನೋವು ವ್ಯಕ್ತಪಡಿಸಿದ್ದಾರೆ. ಈ ಅಪರಾಧ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಈ ನಿಟ್ಟಿನಲ್ಲಿ ಸೂಕ್ತವಾದ ಶಿಸ್ತು ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಅದರ ಪೂರ್ವಭಾವಿಯಾಗಿ ಎಂ.ಜಯಶಂಕರ್ ಅವರಿಂದ ವಿವರಣೆಯನ್ನು ಕೇಳಬೇಕಾಗಿದೆ ಎಂದವರು ಆಗ್ರಹಿಸಿದ್ದಾರೆ.
ಇದೊಂದು ಅತ್ಯಂತ ಕಳವಳಕಾರಿ ವಿಷಯವಾಗಿದ್ದು, ಉಪಕುಲಪತಿಯ ಹುದ್ದೆಯನ್ನು ಪಡೆಯಲು ವಶೀಲಿ ನಡೆಸುವ ಈ ಅನೈತಿಕ ನಡವಳಿಕೆಯಿಂದ ಸಾರ್ವಜನಿಕರು ತೀವ್ರ ಆಕ್ರೋಶಗೊಂಡಿದ್ದಾರೆ. ಅದುದರಿದ ಉಪಕುಲಪತಿಯವರು ಈ ಬಗ್ಗೆ ತಕ್ಷಣವೇ ಮಂಗಳೂರು ವಿಶ್ವವಿದ್ಯಾನಿಲಯ ವಿಶೇಷ ಸಿಂಡಿಕೇಟ್ ಸಭೆಯನ್ನು ತುರ್ತಾಗಿ ಕರೆಯಬೇಕೆಂದು ಪನಿಯಾಲ ಅವರು ಕೋರಿದ್ದಾರೆ.
ಪ್ರೊ. ಜಯಶಂಕರ್ ಅವರಿಂದ ವಿವರಣೆಯ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದ ದೂರು ಹಾಗೂ ಎಫ್‌ಐಆರ್‌ನ ಪ್ರತಿಯನ್ನು ಪಡೆದುಕೊಳ್ಳುವ ಜೊತೆಗೆ ಹಾಗೂ ಅದನ್ನು ಸಿಂಡಿಕೇಟ್‌ನಲ್ಲಿ ಮಂಡಿಸಬೇಕು ಹಾಗೂ ಸಿಂಡಿಕೇಟ್‌ನ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಲೋಚನೆ ನಡೆಸಬೇಕು. ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯವರ ನೇತೃತ್ವದ ಸಮಿತಿಯಿಂದ ತನಿಖೆ ನಡೆಸಬೇಕೆಂದು ಪನಿಯಾಲ ಅವರು ಉಪಕುಲಪತಿಯವರಿಗೆ ಮನವಿ ಮಾಡಿದ್ದಾರೆ.







