ನಾಗರಿಕ ಸಮಾಜದ ಮೌನ ಸರಿಯಲ್ಲ: ಶ್ರೀಪಾದ್ ಭಟ್
'ಶಾಲೆಗಳ ಕುರಿತು ಸರಕಾರದಿಂದ ಗೊಂದಲ ನೀತಿ-ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ '
ಬೆಂಗಳೂರು, ಎ.3: ವಿಶ್ವ ಸಂಸ್ಥೆ, ಯುನಿಸೆಫ್ ಸೇರಿದಂತೆ ತಜ್ಞ ವೈದ್ಯರು ಮಕ್ಕಳಲ್ಲಿ ರೋಗ ನಿರೋದಕ ಶಕ್ತಿಯಿದೆ. ಅವರಿಗೆ ಕೋವಿಡ್ ಕಾಯಿಲೆ ಹರಡುವ ಸಾದ್ಯತೆ ಶೇ. 0.1% ಪ್ರಮಾಣಕ್ಕಿಂತಲೂ ಕಡಿಮೆ ಇದೆಯೆಂದು ಸ್ಪಷ್ಟಪಡಿಸಿವೆ. ಆದಾಗ್ಯು ಶಾಲೆಗಳ ಕುರಿತು ರಾಜ್ಯ ಸರಕಾರ ಕೈಗೊಳ್ಳುತ್ತಿರುವ ಗೊಂದಲಕಾರಿ ನೀತಿಗಳ ಬಗ್ಗೆ ನಾಗರಿಕ ಸಮಾಜ ಮೌನವಹಿಸಿರುವುದು ಬಡ ಸಮುದಾಯದ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಲೇಖಕ ಶ್ರೀಪಾದ್ ಭಟ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ವರ್ಷ ಜೂನ್‍ನಲ್ಲಿ ಕೋವಿಡ್ ಲಾಕ್‍ಡೌನ್ ಸಡಿಲಿಸಲಾಯಿತು. ಆದರೆ, ಡಿಸೆಂಬರ್‍ವರೆಗೆ ಶಾಲೆಗಳನ್ನು ಪ್ರಾರಂಭಿಸಲಿಲ್ಲ, ಬಿಸಿಯೂಟವನ್ನು ಕೊಡಲಿಲ್ಲ. ಆದರೂ ನಮ್ಮ ನಾಗರಿಕ ಸಮಾಜ ಇದ್ಯಾವುದರ ಬಗೆಗೂ ತಲೆ ಕೆಡಿಸಿಕೊಳ್ಳಲಿಲ್ಲವೆಂದು ವಿಷಾದಿಸಿದ್ದಾರೆ.
ನವೆಂಬರ್-ಡಿಸೆಂಬರ್ ತಿಂಗಳಿಂದ ಮದುವೆಗಳಲ್ಲಿ, ಪ್ರವಾಸಿ ಸ್ಥಳಗಳಲ್ಲಿ, ಶಾಪಿಂಗ್ ಮಾಲ್‍ಗಳಲ್ಲಿ, ದೇವಸ್ಥಾನಗಳಲ್ಲಿ ಸಾವಿರಾರು ಜನ, ಮಕ್ಕಳು ಗುಂಪುಗೂಡಲು ಮುಕ್ತ ಅವಕಾಶ ದೊರಕಿತು. ಆದರೆ, ಶಾಲೆಗಳನ್ನು ಮಾತ್ರ ತೆರೆಯಲಿಲ್ಲ. ಇದರಿಂದ ಶೇ.25ರಷ್ಟು ಬಡ ಸಮುದಾಯದ ಮಕ್ಕಳು ಬಾಲ ಕಾರ್ಮಿಕರಾದರು, ಆಗಲೂ ನಮ್ಮ ನಾಗರಿಕ ಸಮಾಜ ಮೌನವಾಗಿತ್ತು.
ತಜ್ಞ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮತ್ತು ಕೆಲ ಶಿಕ್ಷಣ ತಜ್ಞರು ಹಾಗೂ ಕೆಲ ಸಂಘಟನೆಗಳ ಒತ್ತಾಯಕ್ಕೆ ಮಣಿದ ಸರಕಾರ ಫೆಬ್ರವರಿಯಲ್ಲಿ 6-9 ನೇ ತರಗತಿ ಪ್ರಾರಂಬಿಸಿದರು. ಆದರೆ, 1-5 ತರಗತಿ ತೆರೆಯಲಿಲ್ಲ. ಈ ಎಂಟು ತಿಂಗಳ ಅವದಿಯಲ್ಲಿ ಬಡ ಕುಟುಂಬಗಳ ಶೇ.25 ಪ್ರಮಾಣದ ಮಕ್ಕಳು ಬಾಲಕಾರ್ಮಿಕರಾದರು, ಶಿಕ್ಷಣದಿಂದ ವಂಚಿತರಾದರು. ಅವರ ಶಿಕ್ಷಣದ ಭವಿಷ್ಯ ಮುಗಿದ ಕತೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಲಾಕ್‍ಡೌನ್ ಮುಗಿದ ನಂತರವೂ ಶಾಲೆಗಳನ್ನು ಪ್ರಾರಂಭಿಸದ ಪರಿಣಾಮ ಶೇ.33ರಷ್ಟು ಹೆಣ್ಣುಮಕ್ಕಳು ಬಾಲ್ಯ ವಿವಾಹಕ್ಕೆ ಬಲಿಯಾದರು. ಆದರೆ, ವೇದಿಕೆಗಳಲ್ಲಿ, ಅಂಕಣಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಮಾನತೆ, ಸಾಕ್ಷರತೆ ಕುರಿತು ನಿರರ್ಗಳವಾಗಿ ಮಾತನಾಡಿದ ನಮ್ಮ ನಾಗರಿಕ ಸಮಾಜ ಈ ದುರಂತದ ಕುರಿತು ಬಾಯಿ ಬಿಡಲಿಲ್ಲ. ಹಾಗೂ ಶಿಕ್ಷಣ ಇಲಾಖೆಯ, ಸಚಿವರ ಬೇಜವಾಬ್ದಾರಿತನವನ್ನು ಪ್ರಶ್ನಿಸಲಿಲ್ಲ.
ಈಗ ಮತ್ತೊಮ್ಮೆ 6ನೇ ತರಗತಿಯಿಂದ 9ನೇ ತರಗತಿಗಳನ್ನು ಬಂದ್ ಮಾಡಿರುವುದರ ಕುರಿತು ನಮ್ಮ ನಾಗರಿಕರು ಮೌನವಹಿಸಿರುವುದನ್ನು ನೋಡಿದರೆ ನಾಗರಿಕರಾಗಿ ನಮಗೆ ಯಾವ ನೈತಿಕತೆ ಇದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.







