ಸಚಿವ ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ವಿಚಾರ: ನ್ಯಾಯಾಧೀಶರಿಂದ ತನಿಖೆ ನಡೆಸಲು ಕೃಷ್ಣಮೂರ್ತಿ ಆಗ್ರಹ
ಬೆಂಗಳೂರು, ಎ.3: ಸಚಿವ ಕೆ.ಎಸ್.ಈಶ್ವರಪ್ಪ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿರುವ ಕುರಿತು ಸುಪ್ರೀಂಕೋರ್ಟಿನ ನ್ಯಾಯಾಧೀಶರಿಂದ ಸೂಕ್ತ ತನಿಖೆ ನಡೆಸಿ ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಆಗ್ರಹಿಸಿದರು.
ಶನಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಮೇಲೆ ಗಂಭೀರ ಭ್ರಷ್ಟಾಚಾರ ಆರೋಪಗಳು ಕೇಳಿಬಂದಿದ್ದು, ಸ್ವತಃ ಸಚಿವ. ಕೆ.ಎಸ್.ಈಶ್ವರಪ್ಪ ಮತ್ತು ಬಿಜೆಪಿ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಮಾಡಿದ್ದಾರೆ. ಹೀಗಾಗಿ, ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ವರ್ಗಾವಣೆ, ಟೆಂಡರ್ ಸೇರಿದಂತೆ ಹಲವು ಇಲಾಖೆಗಳಲ್ಲಿ ವಿಜಯೇಂದ್ರ ಅಣತಿಯಂತೆ ಎಲ್ಲ ಕೆಲಸ ಕಾರ್ಯಗಳು ನಡೆಯುತ್ತಿವೆ. ಹಾಗಾಗಿ, ಸೂಕ್ತ ತನಿಖೆ ನಡೆಯಬೇಕು. ಅಲ್ಲಿಯವರೆಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಸಲ್ಲಿಸಲಿ ಎಂದು ಅವರು ಹೇಳಿದರು.
ಸಿಡಿ ಪ್ರಕರಣ ಸಂಬಂಧ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಈ ಕೂಡಲೇ ಬಂಧಿಸಬೇಕು ಎಂದ ಅವರು, ರಾಜ್ಯ ಸರಕಾರ ಏಕೆ ರಮೇಶ್ ಜಾರಕಿಹೊಳಿ ಅವರನ್ನು ರಕ್ಷಣೆ ಮಾಡುತ್ತಿದೆ. ಅಲ್ಲದೆ, ಕೆಲಸ ಕೊಡುವುದಾಗಿ ಹೇಳಿ ಯುವತಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪ ಇದೆ. ಅಲ್ಲದೆ, ಯಾರು ಯಾರನ್ನು ಬೇಕಾದರೂ ಅತ್ಯಾಚಾರ ಮಾಡಿದರೂ ಬಂಧಿಸುವುದಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ವಾಗ್ದಾಳಿ ನಡೆಸಿದರು.
ಬಿಎಸ್ಪಿ ರಾಜ್ಯ ಮುಖಂಡ ಗುರುಮೂರ್ತಿ ಮಾತನಾಡಿ, ಸಚಿವ ಈಶ್ವರಪ್ಪ ಬರೆದಿರುವ ಪತ್ರ ಕೇವಲ ಪತ್ರವಲ್ಲ. ರಾಜ್ಯ ಸರಕಾರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಈವರೆಗೆ ಯಾವುದೇ ಒಬ್ಬರೇ ಒಬ್ಬ ಸಚಿವರು ಸಿಎಂ ಆಡಳಿತದ ಬಗ್ಗೆ ಚರ್ಚೆ ಮಾಡಿಲ್ಲ. ಆದರೆ, ಸಚಿವ ಈಶ್ವರಪ್ಪನವರು ಮಾಡಿದ್ದಾರೆ. ಈ ಮೂಲಕ ದೇಶಕ್ಕೆ ಪಾಠ ಹೇಳುತ್ತಿದ್ದವರು ಆಡಳಿತ ಪಾಠವನ್ನು ದೇಶಕ್ಕೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮುಖಂಡರಾದ ಪುರುಷೋತ್ತಮ, ಬೆಂಗಳೂರು ದಕ್ಷಿಣ ಅಧ್ಯಕ್ಷ ಪರ್ವೇಝ್ ಖಾನ್, ಕೇಂದ್ರ ಅಧ್ಯಕ್ಷ ಬೈಲಪ್ಪ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.







