ಹಿಂಬಾಗಿಲ ಮೂಲಕ ಆಡಳಿತ ನಡೆಸುತ್ತಿರುವ ವಿಜಯೇಂದ್ರ: ರಮೇಶ್ ಬಾಬು ಆರೋಪ
ಬೆಂಗಳೂರು, ಎ.3: ರಾಜ್ಯದಲ್ಲಿ ಬಿಜೆಪಿ ಸರಕಾರ ರಾಜಕೀಯ ಮೌಲ್ಯಗಳಿಗೆ ತಿಲಾಂಜಲಿ ನೀಡಿ ಯಡಿಯೂರಪ್ಪನವರ ಏಕವ್ಯಕ್ತಿ ಆಡಳಿತಕ್ಕೆ ತಲೆಬಾಗಿದೆ. ಯಾವುದೆ ಸಾಂವಿಧಾನಿಕ ಹುದ್ದೆ ಇಲ್ಲದಿದ್ದರೂ ಸಂಪೂರ್ಣ ಹಿಡಿತದ ಮೂಲಕ ಹಿಂಬಾಗಿಲಿನ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಮೇಲೆ ಸ್ವಪಕ್ಷೀಯರೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಟೀಕಿಸಿದ್ದಾರೆ.
ರಾಜಕೀಯ ಆರೋಪಗಳಿಗೆ ಉತ್ತರ ನೀಡಬೇಕಾದ ಬಿಜೆಪಿ, ನೆಹರು ಕುಟುಂಬದ ಮೂಲವನ್ನು ಕೆದಕುವ ವ್ಯರ್ಥ ಪ್ರಯತ್ನದ ಮೂಲಕ ತನ್ನ ರಾಜಕೀಯ ದಿವಾಳಿತನ ತೋರಿದೆ. ರಾಜ್ಯ ಬಿಜೆಪಿಯ ಅಧ್ಯಕ್ಷ ನಾಮಕಾವಸ್ಥೆ ಅಧ್ಯಕ್ಷರಾಗಿದ್ದು, ಪಕ್ಷದ ಮತ್ತು ಪಕ್ಷದ ನಾಯಕರ ಮೇಲೆ ಹಿಡಿತವನ್ನು ಹೊಂದಿರುವುದಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಕೀಳುಮಟ್ಟದ ಟೀಕೆಗಳನ್ನು ಮಾಡುತ್ತಲೆ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾರೆ ಎಂದು ಅವರು ತಿರುಗೇಟು ನೀಡಿದ್ದಾರೆ.
ರಾಜ್ಯ ಸರಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಹೊರಗಿನ ವ್ಯಕ್ತಿಗಳ ಅಧಿಕಾರ ಚಲಾವಣೆಯ ಹಿನ್ನೆಲೆಯಲ್ಲಿ ಅನೇಕ ಸಚಿವರು ಅಸಮಾಧಾನಗೊಂಡಿದ್ದಾರೆ. ಪಕ್ಷದ ವೇದಿಕೆಯಲ್ಲಿ ನೀಡುವ ಅಭಿಪ್ರಾಯಗಳಿಗೆ ಯಾವುದೆ ಕಿಮ್ಮತ್ತು ಸಿಗದ ಕಾರಣ ಮತ್ತು ಸಂಪುಟ ಸಭೆಯಲ್ಲಿ ಮುಕ್ತ ಚರ್ಚೆಗೆ ಅವಕಾಶವಾಗದ ಕಾರಣ ಅನೇಕ ಸಚಿವರು, ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ನೀಡಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಯಡಿಯೂರಪ್ಪ ಸರಕಾರದಲ್ಲಿ ಅನೇಕ ಮಂತ್ರಿಗಳ ಖಾತೆಯಲ್ಲಿ ಹಸ್ತಕ್ಷೇಪ ನಡೆಯುತ್ತಿದ್ದು, ಅವರ ನಾಯಕತ್ವದಲ್ಲಿ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ತಮ್ಮ ಗಮನಕ್ಕೆ ಬಾರದೆ ಸಾವಿರಾರು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವ ಕುರಿತು ಗಂಭೀರ ಆರೋಪ ಮಾಡಿರುವ ಸಚಿವ ಈಶ್ವರಪ್ಪ, ತಾವು ಟಪಾಲು ಕೆಲಸ ಮಾಡಲು ಸಚಿವರಾಗಿಲ್ಲ ಎಂದು ಮುಖ್ಯಮಂತ್ರಿಗೆ ಸಡ್ಡು ಹೊಡೆದಿದ್ದಾರೆ. ಮುಜರಾಯಿ ಇಲಾಖೆ ಸಚಿವರ ಗಮನಕ್ಕೆ ತಾರದೆ ಮುಖ್ಯಮಂತ್ರಿ ಇಲಾಖೆಯ 80 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದ್ದು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಸಮಾಧಾನಗೊಂಡಿದ್ದಾರೆ ಎಂದು ಅವರು ದೂರಿದ್ದಾರೆ.
ಈ ಹಿಂದೆ ತಮ್ಮ ಇಲಾಖೆಯಲ್ಲಿ ಮುಖ್ಯಮಂತ್ರಿಯ ಮಗನಿಂದ ಹಸ್ತಕ್ಷೇಪ ನಡೆಯುತ್ತಿದೆ ಎಂದು ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಕೇಂದ್ರ ಬಿಜೆಪಿ ನಾಯಕರಿಗೆ ದೂರು ನೀಡಿದ್ದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ವರ್ಗಾವಣೆ ತಮ್ಮ ಗಮನಕ್ಕೆ ಬಾರದೆ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಆನಂದ್ ಸಿಂಗ್‍ಗೆ ಯಾವ ಖಾತೆ ನೀಡಲಾಗಿದೆ ಎಂದು ಅವರಿಗೂ ಗೊತ್ತಿಲ್ಲ, ಜನರಿಗೂ ಗೊತ್ತಿಲ್ಲ ಎಂದು ರಮೇಶ್ ಬಾಬು ವ್ಯಂಗ್ಯವಾಡಿದ್ದಾರೆ.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವರಾದರೂ, ಇಲಾಖೆಯ ಬಹುತೇಕ ವರ್ಗಾವಣೆ ಮುಖ್ಯಮಂತ್ರಿಯ ಕಚೇರಿಯಿಂದಲೆ ನಡೆಯುತ್ತದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಎರಡು ಪ್ರಮುಖ ಖಾತೆ ಪಡೆದಿರುವ ಡಾ.ಸುಧಾಕರ್, ಕೋವಿಡ್ ಹಿನ್ನೆಲೆಯ ಎಲ್ಲ ಟೆಂಡರ್‍ಗಳನ್ನು ಮುಖ್ಯಮಂತ್ರಿಯ ಕಚೇರಿಯ ಅಣತಿಯಂತೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಾರ್ಮಿಕ ಇಲಾಖಾ ಸಚಿವರು ಸಿಡಿ ಪ್ರಕರಣದಲ್ಲಿ ನ್ಯಾಯಾಲಯದ ಕದ ತಟ್ಟಿದ್ದು, ಒಟ್ಟು ಇಲಾಖೆಯನ್ನು ಮುಖ್ಯಮಂತ್ರಿಯ ಪಾದಕ್ಕೆ ಸಮರ್ಪಣೆ ಮಾಡಿದ್ದಾರೆ. ಏಕೈಕ ಮಹಿಳಾ ಸಚಿವೆ ಶಶಿಕಲಾ ಜೊಲ್ಲೆ ತಮ್ಮ ಸಚಿವ ಸ್ಥಾನ ಉಳಿಸಿಕೊಳ್ಳಲು ಕೇಂದ್ರ ಬಿಜೆಪಿ ನಾಯಕರನ್ನು ನಿಯಮಿತವಾಗಿ ಎಡತಾಕುತ್ತಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಲ್ಲ ಟೆಂಡರ್‍ಗಳನ್ನು ಮುಖ್ಯಮಂತ್ರಿಯ ಕಚೇರಿಯ ಕಣ್ಸನ್ನೆಯಂತೆ ನಡೆಯುತ್ತಿದೆ ಎಂದು ರಮೇಶ್ ಬಾಬು ದೂರಿದ್ದಾರೆ.
ಮುಖ್ಯಮಂತ್ರಿ ಕಚೇರಿಯ ಅಣತಿಗೆ ಅನುಗುಣವಾಗಿ ಸಹಕರಿಸದ ಸಚಿವರ ಇಲಾಖೆಗಳಿಗೆ ವ್ಯವಸ್ಥಿತವಾಗಿ ಅನುದಾನಗಳನ್ನು ಕಡಿತಗೊಳಿಸಲಾಗುತ್ತಿದೆ. ಸಮಾಜಕಲ್ಯಾಣ ಇಲಾಖೆಯ ಪ.ಜಾತಿ, ಪ.ಪಂಗಡದ ಉಪಯೋಜನೆಯಲ್ಲಿ ಕಳೆದ ಸಾಲಿನಲ್ಲಿ 1084 ಕೋಟಿ ರೂ.ಗಳನ್ನು ಕಡಿತಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ತನ್ನ ನಾಯಕತ್ವದಲ್ಲಿ ಹತ್ತಾರು ಮಂತ್ರಿಗಳು ವಿಶ್ವಾಸವನ್ನು ಕಳೆದುಕೊಂಡಿರುವುದರಿಂದ, ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅದೇ ಸಮಯದಲ್ಲಿ ಸರಕಾರದ ವಿರುದ್ಧ ಸೆಡ್ಡು ಹೊಡೆದಿರುವ ಮಂತ್ರಿಗಳು ಗೆರಿಲ್ಲ ಯುದ್ಧ ಮಾಡುವ ಬದಲು, ತಮ್ಮ ಮಂತ್ರಿಗಿರಿಗೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಆಡಳಿತ ಯಂತ್ರಿ ಕುಸಿದಿದ್ದು, ಬಿಜೆಪಿ ಚಾರಿತ್ರ್ಯವಧೆ ಮಾಡುವ ಹೇಳಿಕೆಗಳನ್ನು ನೀಡದೆ, ಆತ್ಮಾವಲೋಕನ ಮಾಡಿಕೊಂಡು, ರಾಜ್ಯ ಸರಕಾರದಲ್ಲಿ ನಿಯಮ ಬಾಹಿರವಾಗಿ ನಡೆಯುತ್ತಿರುವ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಭ್ರಷ್ಟಾಚಾರವನ್ನು ಕೊನೆಗೊಳಿಸಲಿ, ಕನಿಷ್ಠ ತನ್ನ ತಪ್ಪುಗಳನ್ನು ಒಪ್ಪಿಕೊಂಡು ರಾಜ್ಯದ ಜನರ ಕ್ಷಮೆಯಾಚಿಸಲಿ ಎಂದು ರಮೇಶ್ ಬಾಬು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.







