ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಟಾಸ್ಕ್‍ಫೋರ್ಸ್ ರಚನೆ ಅಗತ್ಯ: ಅಬ್ದುಲ್ ಅಝೀಮ್

ಬೆಂಗಳೂರು, ಎ.3: ಬೆಂಗಳೂರು ಮೆಟ್ರೋಪಾಲಿಟಿನ್ ಟಾಸ್ಕ್‍ಫೋರ್ಸ್(ಬಿಎಂಟಿಎಫ್) ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಲ್ಲಿ ಸರಕಾರಿ ಆಸ್ತಿಗಳ ಸಂರಕ್ಷಣೆಗಾಗಿ ಅಸ್ತಿತ್ವದಲ್ಲಿರುವ ಟಾಸ್ಕ್‍ಫೋರ್ಸ್ ಮಾದರಿಯಲ್ಲೆ ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಟಾಸ್ಕ್‍ಫೋರ್ಸ್ ರಚನೆ ಮಾಡುವ ಅಗತ್ಯವಿದೆ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ವಿಶ್ವೇಶ್ವರಯ್ಯ ಗೋಪುರದಲ್ಲಿರುವ ರಾಜ್ಯ ಅಲಸಂಖ್ಯಾತರ ಆಯೋಗದ ಕಚೇರಿಯಲ್ಲಿ ವಕ್ಫ್ ಬೋರ್ಡ್ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಟಾಸ್ಕ್‍ಫೋರ್ಸ್ ಅನ್ನು ಐಜಿ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ರಚಿಸುವ ಸಂಬಂಧ ಸರಕಾರಕ್ಕೆ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ತಮ್ಮ ಕೆಲಸಗಳಿಗಾಗಿ ಬೆಂಗಳೂರಿನಲ್ಲಿ ವಕ್ಫ್ ಬೋರ್ಡ್ ಕಚೇರಿಗೆ ಜನ ಬರಬೇಕಾಗುತ್ತದೆ. ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ವಕ್ಫ್ ಬೋರ್ಡ್‍ನ ಪೂರ್ಣ ಪ್ರಮಾಣದ ವಿಭಾಗೀಯ ಕಚೇರಿಗಳನ್ನು ತೆರೆದು ಕಾರ್ಯನಿರ್ವಹಿಸುವುದು ಉತ್ತಮ ಎಂದು ಅವರು ಹೇಳಿದರು.
ರಾಜ್ಯ ವಕ್ಫ್ ಬೋರ್ಡ್ ಕಚೇರಿಗೆ ಪ್ರತಿನಿತ್ಯ ಸರಾಸರಿ 500 ಮಂದಿ ತಮ್ಮ ಅಹವಾಲುಗಳನ್ನು ಸಲ್ಲಿಸಲು ಆಗಮಿಸುತ್ತಾರೆ. ಒಬ್ಬ ಸಿಇಒ ಹಾಗೂ ಒಬ್ಬ ಸಹಾಯಕ ಸಿಇಒಯಿಂದ ಇಷ್ಟು ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಬಗೆಹರಿಸುವುದು ಕಷ್ಟದ ಕೆಲಸ. ಆದುದರಿಂದ, ಹೆಚ್ಚುವರಿಯಾಗಿ ಇನ್ನೂ ಇಬ್ಬರು ಸಹಾಯಕ ಸಿಇಒಗಳನ್ನು ನೇಮಕ ಮಾಡುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಬ್ದುಲ್ ಅಝೀಮ್ ಸೂಚಿಸಿದರು.
ಹಲವಾರು ವಕ್ಫ್ ಸಂಸ್ಥೆಗಳ ಆಡಳಿತ ಸಮಿತಿಯ ಅವಧಿ ಮುಕ್ತಾಯವಾಗಿದ್ದರೂ ತೋಳ್ಬಲದ ಮೂಲಕ ಸಂಸ್ಥೆಗಳ ಹಿಡಿತವನ್ನು ಕೆಲವರು ತಮ್ಮ ಕೈಯಲ್ಲಿಟ್ಟುಕೊಂಡಿದ್ದಾರೆ. ಅಂತಹ ಸಂಸ್ಥೆಗಳ ಬಗ್ಗೆ ವಿವರ ಸಂಗ್ರಹಿಸಿ ಆಡಳಿತಾಧಿಕಾರಿ ನೇಮಕ ಮಾಡಿ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಲ್ಲಾ ವಕ್ಫ್ ಸಲಹಾ ಸಮಿತಿಗಳು ತಮ್ಮ ವ್ಯಾಪ್ತಿಗೊಳಪಡುವ ವಕ್ಫ್ ಆಸ್ತಿಗಳು, ಸಂಸ್ಥೆಗಳಿಗೆ ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ವಾಹನ ಸೌಲಭ್ಯವನ್ನು ಕಲ್ಪಿಸಿಕೊಡಬೇಕು ಎಂದು ವಕ್ಫ್ ಬೋರ್ಡ್ ಸಿಇಒಗೆ ಅವರು ನಿರ್ದೇಶನ ನೀಡಿದರು.
ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಿಗೆ ಮಾಸಿಕ 2 ಸಾವಿರ ರೂ.ಗೌರವ ಧನ ನೀಡಲಾಗುತ್ತದೆ. ಇವರಿಗೆ ವಾಹನ ಸೌಲಭ್ಯ ಕಲ್ಪಿಸದಿದ್ದರೆ ತಮ್ಮ ವೈಯಕ್ತಿಕ ಹಣದಿಂದಲೆ ಅವರು ಪ್ರಯಾಣ ಮಾಡಬೇಕಾಗುತ್ತದೆ. ಆದುದರಿಂದ, ಇವರ ಗೌರವ ಧನ ಹೆಚ್ಚಳ ಮಾಡಿ ಅಥವಾ ವಾಹನದ ಸೌಲಭ್ಯ ಕಲ್ಪಿಸಿಕೊಡಿ ಎಂದು ಅವರು ಹೇಳಿದರು.
ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಆದಷ್ಟು ತ್ವರಿತಗತಿಯಲ್ಲಿ ಬಗೆಹರಿಸಲು ನ್ಯಾಯಾಧೀಕರಣಗಳನ್ನು ಬಲಪಡಿಸಬೇಕು. ಉತ್ತಮವಾದ ವಕೀಲರನ್ನು ವಕ್ಫ್ ಬೋರ್ಡ್ ಪರವಾಗಿ ವಾದ ಮಂಡಿಸಲು ನೇಮಕ ಮಾಡಿಕೊಳ್ಳಬೇಕು. ವಕ್ಫ್ ಬೋರ್ಡ್‍ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಆದಷ್ಟು ಶೀಘ್ರದಲ್ಲಿ ಭರ್ತಿ ಮಾಡುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೆ, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರ ನೇಮಕಕ್ಕೆ ಚುನಾವಣೆಯನ್ನು ಶೀಘ್ರದಲ್ಲಿ ನಡೆಸುವಂತೆ ಅಬ್ದುಲ್ ಅಝೀಮ್ ಹೇಳಿದರು.
ಪತ್ರಿಕಾಗೋಷ್ಠೀಯಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ಹಾಗೂ ಸಿಇಒ ಮುಹಮ್ಮದ್ ನಝೀರ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ನಿಸಾರ್ ಅಹ್ಮದ್ ಉಪಸ್ಥಿತರಿದ್ದರು.







