ಸಿದ್ದರಾಮಯ್ಯ ಗೌರವದಿಂದ ಮಾತಾಡಲಿ: ಎಸ್.ಆರ್.ವಿಶ್ವನಾಥ್
ಬೆಂಗಳೂರು, ಎ. 3: ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು, ಒಂದು ಗೌರವಯುತ ಸ್ಥಾನದಲ್ಲಿದ್ದಾರೆ. ಆ ಸ್ಥಾನದಲ್ಲಿ ಕುಳಿತು ಸಿದ್ದರಾಮಯ್ಯನವರೂ ಅಧಿಕಾರ ನಡೆಸಿದ್ದಾರೆ. ಈಗ ವಿಪಕ್ಷ ನಾಯಕನ ಸ್ಥಾನದಲ್ಲಿದ್ದಾರೆ. ಆದರೆ, ತಮ್ಮ ಘನತೆ, ಗೌರವವನ್ನು ಅರಿಯದೇ ಸಿದ್ದರಾಮಯ್ಯ ನಾಲಗೆ ಇದೆ ಎಂದು ಹರಿಬಿಡಲಾರಂಭಿಸಿರುವುದು ಅವರ ಗೌರವಕ್ಕೆ ಚ್ಯುತಿ ತಂದುಕೊಂಡಿದ್ದಾರೆಂದು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ನಗರದಲ್ಲಿ ಮಾತನಾಡಿದ ಅವರು, ಹೀಗೆ ಮಾತನಾಡುವುದು ನನಗೆ ರೂಢಿ ಎಂದು ಮಾತು ಮಾತಿಗೆ ಹೇಳುವ ಸಿದ್ದರಾಮಯ್ಯ ಉನ್ನತ ಹುದ್ದೆಯಲ್ಲಿರುವವರನ್ನೂ ಏಕವಚನದಲ್ಲಿ ಸಂಭೋದಿಸುವುದು ತಪ್ಪು. ಇದು ಸಮಾಜಕ್ಕೆ ಕೆಟ್ಟ ಸಂದೇಶವನ್ನು ನೀಡುತ್ತದೆ ಎಂಬ ಸಾಮಾನ್ಯ ಜ್ಞಾನವನ್ನು ಮೊದಲು ಅರಿತುಕೊಳ್ಳಲಿ ಎಂದು ಕಿಡಿಕಾರಿದರು.
ಚುನಾವಣೆ ಸಂದರ್ಭಗಳಲ್ಲಿ ಸಿದ್ದರಾಮಯ್ಯನವರಿಗೆ ತಮ್ಮ ನಾಲಗೆ ಮೇಲೆ ಹಿಡಿತವೇ ಇಲ್ಲದಂತಾಗಿರುತ್ತದೆ. ಈಗ ರಾಜ್ಯದಲ್ಲಿ ಉಪಚುನಾವಣೆಗಳು ನಡೆಯುತ್ತಿರುವ ವೇಳೆ ಜನರನ್ನು ಸೆಳೆದುಕೊಳ್ಳಲೆಂದು ನಮ್ಮ ನಾಯಕರ ವಿರುದ್ಧ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅನ್ನಭಾಗ್ಯದ ವಿಚಾರದಲ್ಲಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಬಡವರಿಗೆ 7 ಕೆ.ಜಿ. ಅಕ್ಕಿ ಕೊಡುತ್ತಿದ್ದೆ. ಯಡಿಯೂರಪ್ಪ ಅದನ್ನು 5 ಕೆ.ಜಿ.ಗೆ ಇಳಿಸಿದ್ದಾನೆಂದು ಹೇಳುವ ಮೂಲಕ ಸಿದ್ದರಾಮಯ್ಯ ತಮ್ಮ ಸಂಸ್ಕೃತಿಯನ್ನು ಜನತೆ ಮುಂದಿಟ್ಟಿದ್ದಾರೆ ಎಂದು ಟೀಕಿಸಿದ ವಿಶ್ವನಾಥ್, ಸಿದ್ದರಾಮಯ್ಯನವರಿಗಿಂತ ಎರಡು ಪಟ್ಟು ಮಾತನಾಡಲು ಬಿಜೆಪಿ ನಾಯಕರಿಗೂ ಬರುತ್ತದೆ. ಆದರೆ, ನಾವು ಸಿದ್ದರಾಮಯ್ಯನವರ ಮಟ್ಟಕ್ಕೆ ಇಳಿಯುವುದಿಲ್ಲ. ನಮಗೊಂದು ಸಂಸ್ಕೃತಿಯನ್ನು ಪಕ್ಷ ಕಲಿಸಿಕೊಟ್ಟಿದೆ ಎಂದರು.
ಯಡಿಯೂರಪ್ಪ ಏನು ಅವರಪ್ಪನ ಮನೆಯಿಂದ ದುಡ್ಡು ತರುತ್ತಾರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಹಾಗಾದರೆ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರಪ್ಪನ ಮನೆಯಿಂದ ಹಣ ತಂದು ಆಡಳಿತ ನಡೆಸಿದ್ದರಾ? ಎಂದು ಪ್ರಶ್ನಿಸಿದ ವಿಶ್ವನಾಥ್, ಕೊರೋನ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪನವರು ಅದನ್ನು ಸಮರ್ಥವಾಗಿ ನಿಭಾಯಿಸಿದರು.
ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂದು ಪ್ರತಿಯೊಬ್ಬ ನಾಗರಿಕರಿಗೂ ಊಟ ವಸತಿ ಸೌಲಭ್ಯವನ್ನು ಕಲ್ಪಿಸಿದರು. ಅಸಂಖ್ಯಾತ ಕುಟುಂಬಗಳಿಗೆ ಉಚಿತವಾಗಿ ಆಹಾರಧಾನ್ಯಗಳು ತಲುಪುವಂತೆ ಮಾಡಿ ರಾಷ್ಟ್ರ ಮಟ್ಟದಲ್ಲಿ ಒಳ್ಳೆಯ ಹೆಸರನ್ನು ತೆಗೆದುಕೊಂಡರು. ಆದರೆ, ಸಿದ್ದರಾಮಯ್ಯ ಮೊಸರಲ್ಲಿ ಕಲ್ಲು ಹುಡುಕುವಂತೆ ವಿನಾಕಾರಣ ಯಡಿಯೂರಪ್ಪ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.







