ಸಿಡಿ ಪ್ರಕರಣ: ಸಿಬಿಐ ತನಿಖೆ ನಡೆಸುವಂತೆ ಪಿಐಎಲ್
ಬೆಂಗಳೂರು, ಎ.3: ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಹೈಕೊರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಈ ಕುರಿತಂತೆ ವಕೀಲರಾದ ಡಾ.ಎಸ್.ಉಮೇಶ್ ಸಲ್ಲಿಸಿರುವ ಅರ್ಜಿ ಅನ್ನು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಾಗಿದೆ. ಇನ್ನು, ಅರ್ಜಿಯಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವಾಲಯ, ಮಾಹಿತಿ ಮತ್ತು ಪ್ರಸರಣ ಸಚಿವಾಲಯ, ರಾಜ್ಯ ಸರಕಾರ ನೇಮಿಸಿರುವ ಸಿಟ್, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಮತ್ತು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವನ್ನು ಪ್ರತಿವಾದಿ ಮಾಡಲಾಗಿದೆ.
ಅರ್ಜಿಯಲ್ಲಿ ಏನಿದೆ?: ಸಿಡಿ ಪ್ರಕರಣ ದಿನದಿಂದ ದಿನಕ್ಕೆ ಹಾದಿ ತಪ್ಪುತ್ತಿದೆ. ಇದೇ ವಿಚಾರವಾಗಿ ಸದನದಲ್ಲೂ ಚರ್ಚೆ ಮಾಡಿ ಅಮೂಲ್ಯ ಸಮಯ ವ್ಯರ್ಥ ಮಾಡಲಾಗಿದೆ. ಆಡಳಿತ ಮತ್ತು ಪ್ರತಿಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ. ರಾಜ್ಯ ಸರಕಾರದ ಆಡಳಿತ ಯಂತ್ರವೂ ದುರ್ಬಲಕೊಂಡಿದೆ. ಮತ್ತೊಂದೆಡೆ ಈ ಪ್ರಕರಣ ರಾಜಕೀಯ ಆಯಾಮ ಪಡೆದುಕೊಂಡಿರುವುದರಿಂದ ಸಿಟ್ ಹಾಗೂ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಕೂಡ ಸೂಕ್ತ ತನಿಖೆ ನಡೆಸುತ್ತಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು, ಸಮರ್ಪಕ ತನಿಖೆ ನಡೆಸಲು ಮತ್ತು ತಪ್ಪಿತಸ್ಥರನ್ನು ಗುರುತಿಸಲು ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇಲ್ಲವೇ, ಪ್ರಕರಣದ ತನಿಖೆಗೆಂದೇ ವಿಶೇಷ ತನಿಖಾ ತಂಡ ರಚಿಸಲು ಕೇಂದ್ರ ಸರಕಾರಕ್ಕೆ ಆದೇಶಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ಡಾ.ಎಸ್.ಉಮೇಶ್ ತಿಳಿಸಿದ್ದಾರೆ.







