ಎರಡು ಪದಗಳ ಟ್ವೀಟ್‌ನೊಂದಿಗೆ ಚುನಾವಣಾ ಆಯೋಗವನ್ನು ಟೀಕಿಸಿದ ರಾಹುಲ್ ಗಾಂಧಿ

ಹೊಸದಿಲ್ಲಿ: ಅಸ್ಸಾಂನಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣೇಂದು ಪಾಲ್ ಪತ್ನಿಯ ಕಾರಿನಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರ (ಇವಿಎಂ) ಸಾಗಿಸಿದ ಅಧಿಕಾರಿಗಳು ಹಾಗೂ ಬಿಜೆಪಿಯ ಹಿರಿಯ ನಾಯಕ ಹಿಮಂತ ಬಿಸ್ವಾ ಶರ್ಮಾರಿಗೆ ವಿಧಿಸಿರುವ ಚುನಾವಣಾ ಪ್ರಚಾರ ನಿಷೇಧ ಅವಧಿಯನ್ನು 48 ಗಂಟೆಯಿಂದ 24 ಗಂಟೆಗೆ ಕಡಿಮೆ ಮಾಡಿ ಭಾರೀ ವಿವಾದಕ್ಕೆ ಸಿಲುಕಿರುವ ಚುನಾವಣಾ ಆಯೋಗವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕೇವಲ ಎರಡು ಪದಗಳ ಮೂಲಕ ಟ್ವಿಟರ್ ನಲ್ಲಿ ಶನಿವಾರ ಟೀಕಿಸಿದ್ದಾರೆ.
ಎಲೆಕ್ಷನ್ "ಕಮಿಷನ್'' ಎಂದು ಟ್ವೀಟಿಸಿರುವ ರಾಹುಲ್ ಗಾಂಧಿ ಚುನಾವಣಾ ಆಯೋಗದ ಮೇಲೆ ನೇರ ದಾಳಿ ನಡೆಸಿದರು.
ಅಸ್ಸಾಂನಲ್ಲಿ ಇವಿಎಂಯನ್ನು ಖಾಸಗಿ ವಾಹನದಲ್ಲಿ ಸಾಗಿಸಿದ ಘಟನೆಗೆ ಸಂಬಂಧಿಸಿ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ಬಿಜೆಪಿ ನಾಯಕನ ವಾಹನದಲ್ಲಿ ಇವಿಎಂ ಅನ್ನು ಸಾಗಿಸುವ ಉದ್ದೇಶಿತ ವೀಡಿಯೊ ವ್ಯಾಪಕವಾಗಿ ಪ್ರಸಾರವಾದ ನಂತರ ಅಸ್ಸಾಂನ ರತಾಬರಿಯ ಮರು ಚುನಾವಣೆಗೆ ಆಯೋಗವು ಆದೇಶಿಸಿತ್ತು.
"ಚುನಾವಣಾ ಆಯೋಗದ ಕಾರು ಕೆಟ್ಟು ಹೋಗಿದೆ, ಬಿಜೆಪಿಯ ಆಶಯಗಳು ಕೆಟ್ಟದಾಗಿದೆ ಹಾಗೂ ಪ್ರಜಾಪ್ರಭುತ್ವದ ಸ್ಥಿತಿ ಹದಗೆಟ್ಟಿದೆ" ಎಂದು ಶುಕ್ರವಾರ ಹಿಂದಿಯಲ್ಲಿ ಮಾಡಿರುವ ಮತ್ತೊಂದು ಟ್ವೀಟ್ ನಲ್ಲಿ 50ರ ವಯಸ್ಸಿನ ರಾಹುಲ್ ತಿಳಿಸಿದ್ದಾರೆ.
Election “Commission”.
— Rahul Gandhi (@RahulGandhi) April 3, 2021
EC की गाड़ी ख़राब,
— Rahul Gandhi (@RahulGandhi) April 2, 2021
भाजपा की नीयत ख़राब,
लोकतंत्र की हालत ख़राब!#EVMs







