ಮೈಸೂರಿನಲ್ಲಿ ಯುವಕರಲ್ಲೇ ಅತೀ ಹೆಚ್ಚು ಕೊರೋನ ಸೋಂಕು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಮೈಸೂರು,ಎ.3: ಕೊರೋನ ಸೋಂಕು ಪ್ರಕರಣ ಮೈಸೂರಿನಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಅದರಲ್ಲೂ ಯುವಕರಲ್ಲೇ ಅತಿ ಹೆಚ್ಚು ಕೊರೋನ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಳವಳ ವ್ಯಕ್ತಪಡಿಸಿದರು.
ಮೈಸೂರಿನ ತಮ್ಮ ಕಛೇರಿಯಲ್ಲಿ ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು ಮೈಸೂರಿನಲ್ಲಿ ದಿನೇ ದಿನೇ ಕೊರೋನ ಪ್ರಕರಣ ಹೆಚ್ಚಾಗುತ್ತಿದ್ದು, ಈ ನಡುವೆ ಸೆಕೆಂಡರಿ ಕಾಂಟ್ಯಾಕ್ಟ್ ನವರು ಟೆಸ್ಟಿಂಗ್ ಮಾಡಿಸಿಕೊಳ್ಳಲು ಬರುತ್ತಿಲ್ಲ. ಇದರಿಂದ ಮೈಸೂರಿನಲ್ಲಿ ಕೊರೋನ ಸೋಂಕು ಹೆಚ್ಚಾಗಿದೆ. ಅದರಲ್ಲೂ ಯುವಕರಲ್ಲೇ ಅತಿ ಹೆಚ್ಚು ಕೊರೋನ ಸೋಂಕು ಕಾಣಿಸಿಕೊಳ್ಳುತ್ತಿದೆ. ಇಂದು ಕೂಡ ಪಾಸಿಟಿವ್ ಪ್ರಕರಣ 170 ರ ಗಡಿ ದಾಟಿದೆ. ಇದರಲ್ಲಿ ನಗರ ಪ್ರದೇಶದಲ್ಲೇ ಹೆಚ್ಚು ಪಾಸಿಟಿವ್ ಪ್ರಕರಣ ಕಾಣಿಸಿಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು.
ಸದ್ಯ ಪ್ರತಿದಿನ 6 ಸಾವಿರ ಜನರಿಗೆ ಕೊರೋನ ಪರೀಕ್ಷೆ ಮಾಡಲಾಗುತ್ತಿದೆ. ಸಣ್ಣ ವಯಸ್ಸಿನವರಲ್ಲಿ ನಮಗೆ ಕೊರೋನ ಬರಲ್ಲ ಎಂಬ ಅಸಡ್ಡೆ ಇದೆ. ಈ ಕಾರಣದಿಂದ ಯುವಕರಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಈ ಬಗ್ಗೆ ಮೈಸೂರು ಜಿಲ್ಲಾಡಳಿತ ಅನಾಲಿಸಿಸ್ ಮಾಡಿದೆ. ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಅದರಲ್ಲೂ ಬೇರೆ ಕಾಯಿಲೆ ಇರುವವರಿಗೆ ಕೊರೋನ ಸೋಂಕು ತಗುಲಿ ಸಾವನಪ್ಪುತ್ತಿದ್ದಾರೆ. ಪ್ರವಾಸಿ ತಾಣಗಳನ್ನು ಮುಚ್ಚುವ ಪ್ರಸ್ತಾಪವನ್ನು ನಾವು ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿಲ್ಲ. ಪ್ರವಾಸಿತಾಣಗಳಿಂದಲೇ ಕೊರೋನ ಹೆಚ್ಚಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ನಗರದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಂಡು ಉಚಿತವಾಗಿ ಲಸಿಕೆ ನೀಡುವ ಪ್ರಯತ್ನ ನಡೆಯುತ್ತಿದೆ. ಒಂದು ತಿಂಗಳಲ್ಲಿ ನಾವು ಎಲ್ಲರಿಗೂ ಲಸಿಕೆ ನೀಡಲಾಗುತ್ತೆ. ತಾಲೂಕು ಮಟ್ಟದಲ್ಲಿ ಉಪಕೇಂದ್ರಗಳಲ್ಲಿ ವೈದ್ಯರ ಕೊರತೆ ಇದೆ. ಹಿಂದೆ ಲಸಿಕೆ ಕೊರತೆ ಇತ್ತು. ವಾರದ ಎಲ್ಲಾ ದಿನಗಳಲ್ಲಿ ಲಸಿಕೆ ನೀಡಲು ಕೇಂದ್ರ ಸರ್ಕಾರದ ಆದೇಶ ಬಂದಿದೆ. ಇಡೀ ತಿಂಗಳ ಎಲ್ಲಾ ದಿನ ಲಸಿಕೆ ನೀಡಲಾಗುತ್ತೆ ಎಂದು ತಿಳಿಸಿದರು.
ಕೊರೋನ ಪ್ರಮಾಣ ಹೆಚ್ಚಾಗುತ್ತಿದೆ. ಎಲ್ಲಾ ಜಾತ್ರೆಗಳನ್ನು ನಾವು ರದ್ದು ಮಾಡಿದ್ದೇವೆ. ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನಾವು ರಾಜ್ಯದಲ್ಲಿ ಪಾಸಿಟಿವ್ ರೇಟ್ ನಲ್ಲಿ ಮೊದಲ ಸ್ಥಾನದಲ್ಲಿ ಇದ್ದೇವೆ. ನಾವು ವ್ಯಾಕ್ಸಿನ್ ತೆಗೆದುಕೊಂಡರೆ ಕೊರೋನ ತಗುಲಿದರೂ ಅದು ಪರಿಣಾಮಕಾರಿ ಆಗಿ ಇರುವುದಿಲ್ಲ.ಹಾಗಾಗಿ ಎಲ್ಲರೂ ಲಸಿಕೆ ತೆಗೆದುಕೊಳ್ಳಿ ಎಂದರು.







