'ಮದ್ಯದ ಬ್ರಾಂಡ್ ಲೋಗೊ' ಇರುವ ಜೆರ್ಸಿ ಧರಿಸುವುದಿಲ್ಲ ಎಂದು ಸಿಎಸ್‌ಕೆ ತಂಡಕ್ಕೆ ತಿಳಿಸಿದ ಮೊಯಿನ್ ಅಲಿ
ಸಮ್ಮತಿ ವ್ಯಕ್ತಪಡಿಸಿದ ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ: ತಮ್ಮ ಜೆರ್ಸಿಯಿಂದ ನಿರ್ದಿಷ್ಟ ಪ್ರಾಯೋಜಕ ಲೋಗೊವನ್ನು ತೆಗೆದುಹಾಕುವಂತೆ ಇಂಗ್ಲೆಂಡ್ ಆಲ್‍ರೌಂಡರ್ ಮೊಯಿನ್ ಅಲಿ ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್‍ಮೆಂಟ್ ಗೆ ವಿನಂತಿಸಿದ್ದಾರೆ. ಅಲಿ ಮನವಿಗೆ ಸಿಎಸ್ ಕೆ ಸಮ್ಮತಿ ವ್ಯಕ್ತಪಡಿಸಿದೆ ಎಂದು indiatoday.in ವರದಿ ಮಾಡಿದೆ.
ಮೊಯಿನ್ ಅಲಿ ಅವರು ಇಸ್ಲಾಂ ಧರ್ಮೀಯರಾಗಿರುವ ಕಾರಣ ಆಲ್ಕೋಹಾಲ್ ಬ್ರ್ಯಾಂಡ್ ನ ಲೋಗೊವನ್ನು ಬೆಂಬಲಿಸುತ್ತಿಲ್ಲ. ಹೀಗಾಗಿ ಅವರು ಇಂಗ್ಲೆಂಡ್ ಸಹಿತ ವಿಶ್ವದ ಯಾವುದೇ ದೇಶೀಯ ಕ್ರಿಕೆಟ್ ತಂಡಗಳ ಜೆರ್ಸಿಗಳಲ್ಲಿ ಈ ಲೋಗೊವನ್ನು ಧರಿಸಲು ಇಷ್ಟಪಡುತ್ತಿಲ್ಲ ಎಂದು ತಿಳಿದು ಬಂದಿದೆ.
ಚೆನ್ನೈ ಸೂಪರ್ ಕಿಂಗ್ಸ್ ಜರ್ಸಿಯಲ್ಲಿ ಎಸ್ ಎನ್ ಜೆ 10000 ಲಾಂಛನವಿದೆ. ಇದು ಚೆನ್ನೈ ಮೂಲದ ಎಸ್ ಎನ್ ಜೆ ಡಿಸ್ಟಿಲರೀಸ್ ನ ಉತ್ಪನ್ನದ ಬ್ರಾಂಡ್ ಆಗಿದೆ. ಸಿಎಸ್‍ಕೆ ಆಡಳಿತವು ಮೊಯಿನ್ ಅಲಿ ಅವರ ಮನವಿಯನ್ನು ಒಪ್ಪಿಕೊಂಡಿದ್ದು, ಅವರು ಪಂದ್ಯದ ವೇಳೆ ಧರಿಸುವ ಜೆರ್ಸಿಯಿಂದ ಲೋಗೊವನ್ನು ತೆಗೆದು ಹಾಕಿದೆ.
ಸಿಎಸ್‍ಕೆ 33ರ ಹರೆಯದ ಮೊಯಿನ್ ಅಲಿ ಅವರನ್ನು ಫೆಬ್ರವರಿಯಲ್ಲಿ ನಡೆದಿದ್ದ ಐಪಿಎಲ್-2021ರ ಆಟಗಾರರ ಹರಾಜಿನ ವೇಳೆ 7 ಕೋ.ರೂ. ನೀಡಿ ಖರೀದಿಸಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಿಕ ಅಲಿ ಆಡುತ್ತಿರುವ ಎರಡನೇ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್. 2018ರಿಂದ ಮೂರು ಋತುವಿಗೆ ಆರ್ ಸಿಬಿ ಪರವಾಗಿ ಅಲಿ ಆಡಿದ್ದರು.
ಮೊಯಿನ್ ಅಲಿ ಈ ತನಕ 19 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಒಟ್ಟು 309 ರನ್ ಹಾಗೂ 10 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಈ ಋತುವಿನಲ್ಲಿ ಸಿಎಸ್‍ಕೆ ತಂಡದಲ್ಲಿ ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ನಾಯಕತ್ವದಡಿ ಆಡಲು ಉತ್ಸುಕನಾಗಿದ್ದೇನೆ ಎಂದು ಕಳೆದ ತಿಂಗಳು ಅಲಿ ಹೇಳಿದ್ದರು.
ಮೂರು ಬಾರಿಯ ಚಾಂಪಿಯನ್ ಸಿಎಸ್ ಕೆ ಎಪ್ರಿಲ್ 10ರಂದು ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಆಡುವ ಮೂಲಕ ಐಪಿಎಲ್-2021ರಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.