ಪ.ಬಂಗಾಳದಲ್ಲಿ ಅಧಿಕಾರಕ್ಕೆ ಬಂದರೆ ಸಿಎಎ ಮಾತ್ರ ಜಾರಿ,ಎನ್‌ಆರ್‌ಸಿ ಇಲ್ಲ: ಬಿಜೆಪಿ

ಕೋಲ್ಕತಾ,ಎ.4: ಪಶ್ಚಿಮ ಬಂಗಾಳದಲ್ಲಿ ತಾನು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಸಿಎಎ ಅನ್ನು ಮಾತ್ರ ಜಾರಿಗೊಳಿಸುತ್ತೇನೆ ಮತ್ತು ಎನ್‌ಆರ್‌ಸಿ ಪ್ರಕ್ರಿಯೆಯನ್ನು ನಡೆಸುವುದಿಲ್ಲ ಎಂದು ಬಿಜೆಪಿ ಹೇಳಿದೆ.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಷ್ ವಿಜಯವರ್ಗೀಯ ಅವರು, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ನಾವು ರಾಜ್ಯದಲ್ಲಿ ಸಿಎಎ ಅನ್ನು ಮಾತ್ರ ಜಾರಿಗೊಳಿಸುತ್ತೇವೆ. ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವವನ್ನು ಮಂಜೂರು ಮಾಡಲು ನಾವು ಶ್ರಮಿಸುತ್ತಿರುವುದರಿಂದ ಅದು ನಮಗೆ ಮಹತ್ವದ ವಿಷಯವಾಗಿದೆ. ನಾವು ಚುನಾವಣೆಯಲ್ಲಿ ಗೆದ್ದರೂ ಎನ್‌ಆರ್‌ಸಿ ಪ್ರಕ್ರಿಯೆಯನ್ನು ನಡೆಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಪಕ್ಷವು ಸರಕಾರವನ್ನು ರಚಿಸಿದರೆ ಮೊದಲ ಸಂಪುಟ ಸಭೆಯಲ್ಲಿಯೇ ಸಿಎಎ ಅನ್ನು ಜಾರಿಗೊಳಿಸುವುದಾಗಿ ಬಿಜೆಪಿ ಪ.ಬಂಗಾಳ ಕ್ಕಾಗಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆಯನ್ನು ನೀಡಿದೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ಬಿಜೆಪಿಯ ವಿರುದ್ಧ ಅಪಪ್ರಚಾರ ಅಭಿಯಾನವನ್ನು ನಡೆಸುತ್ತಿದೆ ಎಂದು ಆರೋಪಿಸಿದ ವಿಜಯವರ್ಗೀಯ ಅವರು,ಸಿಎಎ ಹಲವಾರು ಜನರಿಗೆ ಲಾಭದಾಯಕವಾಗಲಿದೆ,ಹೀಗಿರುವಾಗಿ ಟಿಎಂಸಿ ಅದನ್ನೇಕೆ ವಿರೋಧಿಸುತ್ತಿದೆ ಎನ್ನುವುದು ಅಚ್ಚರಿದಾಯಕವಾಗಿದೆ ಎಂದರು.
ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಿಎಎ ವಿರುದ್ಧ ತನ್ನ ಪಕ್ಷದ ನಿಲುವನ್ನು ಪದೇಪದೇ ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷದ ಜನವರಿಯಲ್ಲಿ ರಾಜ್ಯ ವಿಧಾನಸಭೆಯು ಸಿಎಎ ವಿರುದ್ಧ ನಿರ್ಣಯವನ್ನೂ ಅಂಗೀಕರಿಸಿತ್ತು.
ಚುನಾವಣಾ ಆಯೋಗವು ಬಿಜೆಪಿ ಪರ ಒಲವು ಹೊಂದಿದೆ ಎಂಬ ಹೇಳಿಕೆಗಾಗಿ ಬ್ಯಾನರ್ಜಿ ವಿರುದ್ಧ ದಾಳಿ ನಡೆಸಿದ ವಿಜಯವರ್ಗೀಯ, ತಾನು ಚುನಾವಣೆಯಲ್ಲಿ ಗೆದ್ದಾಗ ಚುನಾವಣಾ ಆಯೋಗವು ಪಕ್ಷಪಾತದಿಂದ ವರ್ತಿಸುತ್ತಿದೆ ಎಂದು ಬ್ಯಾನರ್ಜಿಯವರಿಗೆ ಎಂದೂ ಅನ್ನಿಸಿರಲೇ ಇಲ್ಲ. ವ್ಯಂಗ್ಯವೆಂದರೆ ನೀವು ಚುನಾವಣೆಗಳಲ್ಲಿ ಗೆದ್ದಾಗ ಎಲ್ಲವೂ ಸರಿಯಿದೆ ಎಂದು ನಿಮಗೆ ಅನಿಸುತ್ತದೆ. ಆದರೆ ಸೋಲಿನ ವಾಸನೆ ಹೊಡೆಯತೊಡಗಿದಾಗ ನೀವು ಚುನಾವಣಾ ಆಯೋಗ ಮತ್ತು ವಿದ್ಯುನ್ಮಾನ ಮತದಾನ ಯಂತ್ರಗಳನ್ನು ದೂರುತ್ತೀರಿ ಎಂದರು.
ಹಾಲಿ ನಡೆಯುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಾನು 294 ಸ್ಥಾನಗಳ ಪೈಕಿ 200ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದ್ದೇನೆ ಎಂಬ ಬಿಜೆಪಿಯ ಹೇಳಿಕೆಯನ್ನು ಅವರು ಪುನರುಚ್ಚರಿಸಿದರು.