ರಾಜ್ಯ ಉಪಚುನಾವಣೆ: ಪ್ರಚಾರಕ್ಕೆ ಮೆರಗು ನೀಡಲಿರುವ ಘಟಾನುಘಟಿ ನಾಯಕರು

ಬೆಂಗಳೂರು, ಎ. 4: ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಪ್ರತಿಷ್ಠೆ, ಪೈಪೋಟಿ ಸೃಷ್ಟಿಸಿರುವ ಬೆಳಗಾವಿ ಲೋಕಸಭಾ ಕ್ಷೇತ್ರ ಸಹಿತ ಮೂರು ಕ್ಷೇತ್ರಗಳ ಉಪಚುನಾವಣಾ ಅಖಾಡ ರಂಗೇರುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಘಟಾನುಘಟಿ ನಾಯಕರು ನಾಳೆಯಿಂದ ಪ್ರಚಾರಕ್ಕೆ ಇಳಿಯಲಿದ್ದಾರೆ.
ಎ.17ರಂದು ನಡೆಯಲಿರುವ ಉಪಚುನಾವಣೆಗೆ ಮೂರು ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಒಟ್ಟು ಮೂವತ್ತು ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಕೋವಿಡ್ ಸೋಂಕಿನ ಎರಡನೆ ಅಲೆಯ ಆತಂಕ, ನಿರ್ಬಂಧದ ಮಧ್ಯೆ ಚುನಾವಣೆ ನಡೆಯುತ್ತಿದ್ದು, ತಮ್ಮ ಅಭ್ಯರ್ಥಿಗಳ ಗೆಲುವಿಗೆ ಮುಖಂಡರು ಬೇಸಿಗೆ ಬಿರು ಬಿಸಿಲನ್ನು ಲೆಕ್ಕಿಸದೆ ಶ್ರಮಿಸುತ್ತಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ್ ಅಂಗಡಿ ಪರ ಸಚಿವ ಜಗದೀಶ್ ಶೆಟ್ಟರ್ ಮತಬೇಟೆ ನಡೆಸಿದರೆ, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಎಂ.ಬಿ.ಪಾಟೀಲ್, ಶಾಸಕಿ ಅಂಜಲಿ ನಿಂಬಾಳ್ಕರ್ ಸೇರಿದಂತೆ ಹಲವು ಮುಖಂಡರು ಕ್ಷೇತ್ರದ ವಿವಿಧೆಡೆ ಪ್ರಚಾರ ನಡೆಸಿದರು. ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಪರ ಪಕ್ಷದ ಉಪಾಧ್ಯಕ್ಷ ವಿಜಯೇಂದ್ರ ಪ್ರಚಾರ ಕೈಗೊಂಡರು.
ಹತ್ತು ದಿನ ಪ್ರಚಾರ: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಾಳೆ(ಎ.5)ಯಿಂದ 8 ದಿನಗಳ ಕಾಲ ಉಪಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರದ ವಿವಿಧೆಡೆ ಸಿದ್ದರಾಮಯ್ಯ ಅವರು ಪ್ರಚಾರ ನಡೆಸಲಿದ್ದಾರೆ.
ಎ.5 ಮತ್ತು 6ರಂದು ಮಸ್ಕಿ, 7 ಮತ್ತು 8ರಂದು ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ, ಎ.9 ಮತ್ತು 10ರಂದು ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಬಳಿಕ ಎ.11ರಂದು ಮಸ್ಕಿ ಹಾಗೂ 12ರಂದು ಬಸವಕಲ್ಯಾಣದಲ್ಲಿ ಸಿದ್ದರಾಮಯ್ಯ ಬಹಿರಂಗ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆಂದು ಸಿದ್ದರಾಮಯ್ಯರ ಕಚೇರಿ ತಿಳಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್ ಸೇರಿದಂತೆ ಹಲವು ಮುಖಂಡರು ಹಾಗೂ ಪಕ್ಷದ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರ ಮುಖ್ಯಮಂತ್ರಿ ಯಡಿಯೂರಪ್ಪ ನಾಳೆಯೇ ಪ್ರಚಾರದ ಅಖಾಡಕ್ಕೆ ಧುಮುಕಲಿದ್ದು, ಅವರಿಗೆ ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಉಮೇಶ್ ಕತ್ತಿ, ಶೆಟ್ಟರ್ ಸೇರಿದಂತೆ ಇನ್ನಿತರರು ಸಾಥ್ ನೀಡಲಿದ್ದಾರೆ.







