ಅಸ್ಸಾಂ: ತಾಮುಲ್ಪುರ ಮತದಾನ ಮುಂದೂಡುವಂತೆ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ ಬಿಪಿಎಫ್
ಹೊಸದಿಲ್ಲಿ, ಎ. 5: ತಾಮುಲ್ಪುರ ಕ್ಷೇತ್ರದ ಮತದಾನಕ್ಕೆ ಒಂದು ವಾರಕ್ಕಿಂತಲೂ ಕಡಿಮೆ ದಿನ ಬಾಕಿ ಇರುವಾಗ ತನ್ನ ಪಕ್ಷದ ಅಭ್ಯರ್ಥಿ ಬಿಜೆಪಿಗೆ ಪಕ್ಷಾಂತರ ಮಾಡಿರುವುದರಿಂದ ತಾಮುಲ್ಪುರ ಕ್ಷೇತ್ರದ ಮತದಾನವನ್ನು ಮುಂದೂಡುವಂತೆ ಕೋರಿ ಅಸ್ಸಾಂನಲ್ಲಿ ಕಾಂಗ್ರೆಸ್ನ ಮಿತ್ರ ಪಕ್ಷವಾಗಿರುವ ಬೋಡೋಲ್ಯಾಂಡ್ ಪೀಪಲ್ಸ್ ಪ್ರಂಟ್ (ಬಿಪಿಎಫ್) ಶನಿವಾರ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದೆ.
ತಾಮುಲ್ಪುರದಲ್ಲಿ ಎಪ್ರಿಲ್ 6ರಂದು ಮತದಾನ ನಡೆಯಲಿದ್ದು, ನಾಮಪತ್ರ ಹಿಂದೆಗೆಯುವ ಗುಡುವಿನ ಬಳಿಕ ಎಪ್ರಿಲ್ 1ರಂದು ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ನ ರಂಗ್ಜಾ ಖುಂಗುರ್ ಬಸುಮತಾರಿ ಬಿಜೆಪಿಗೆ ಸೇರಿದ್ದರು. ಇದಕ್ಕೆ ಸಂಬಂಧಿಸಿ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಹಾಗೂ ಕಾಂಗ್ರೆಸ್ ಈ ಹಿಂದೆ ಚುನಾವಣಾ ಆಯೋಗವನ್ನು ಸಂಪರ್ಕಿಸಿತ್ತು ಹಾಗೂ ಮತದಾನವನ್ನು ರದ್ದುಗೊಳಿಸುವಂತೆ ಆಗ್ರಹಿಸಿತ್ತು. ಚುನಾವಣಾ ಆಯೋಗ ತಾಮುಲ್ಪುರ ಕ್ಷೇತ್ರದ ಚುನಾವಣಾಧಿಕಾರಿ ಸಂಜೀವ್ ಶರ್ಮಾ ಅವರ ಉಪಸ್ಥಿತಿಯಲ್ಲಿ ಶನಿವಾರ ಈ ಬಗ್ಗೆ ವಿಚಾರಣೆ ನಡೆಸಿತ್ತು. ಆದರೆ, ಇದುವರೆಗೆ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ.
ಬಸುಮತಾರಿ ನಿಷ್ಠೆ ಬದಲಾಯಿಸಿದ ಬಳಿಕ ಕಾಂಗ್ರೆಸ್, ಅವರು ಬಿಜೆಪಿ ಸೇರುವ ಮುನ್ನ ಎರಡು ದಿನಗಳ ಕಾಲ ನಾಪತ್ತೆಯಾಗಿದ್ದರು ಎಂದು ಹೇಳಿತ್ತು. ಅನಂತರ ಮಾರ್ಚ್ 31ರಂದು ಅಸ್ಸಾಂನ ಸಚಿವ ಹಿಮಾಂತ ಬಿಸ್ವ ಶರ್ಮಾ ಟ್ವೀಟ್ ಮಾಡಿ, ಸಭೆಯ ಬಳಿಕ ಬಸುಮತಾರಿ ಅವರು ಬಿಜೆಪಿಗೆ ಸೇರಲು ಬಯಸಿದ್ದಾರೆ ಎಂದು ಟ್ವೀಟ್ ಮಾಡಿದ್ದರು.