ಮಾಹಿತಿ ತಂತ್ರಜ್ಞಾನ ನಿಯಮ-2021 ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ

ಬೆಂಗಳೂರು, ಎ.4: ಡಿಜಿಟಲ್ ಮೀಡಿಯಾಗಳಿಗೆ ಅಂಕುಶ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಇತ್ತೀಚಿಗೆ ರೂಪಿಸಿರುವ ಮಾಹಿತಿ ತಂತ್ರಜ್ಞಾನ (ಇಂಟರ್ ಮೀಡಿಯರಿ ಗೈಡ್‍ಲೈನ್ಸ್ ಅಂಡ್ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮ 2021ನ್ನು ಪ್ರಶ್ನಿಸಿ ನಗರದ ಟ್ರೂತ್ ಫೌಂಡೇಷನ್ ಇಂಡಿಯಾ ಸಂಸ್ಥೆ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ. ಅರ್ಜಿ ಇನ್ನಷ್ಟೆ ವಿಚಾರಣೆಗೆ ಬರಬೇಕಿದೆ..
ಕನ್ನಡದಲ್ಲಿ ನ್ಯೂಸ್ ಪೋರ್ಟಲ್ ನಡೆಸುತ್ತಿರುವ ಸಂಸ್ಥೆ ಸಲ್ಲಿಸಿರುವ ಈ ಅರ್ಜಿಯಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ನಿಯಮ 'ಮಾಹಿತಿ ತಂತ್ರಜ್ಞಾನ ಕಾಯ್ದೆ-2000'ಕ್ಕೆ ವಿರುದ್ಧವಾಗಿದೆ. ಸಂಹಿತೆಯಲ್ಲಿ ಪ್ರಸ್ತಾಪಿಸಲಾಗಿರುವ ಸಾಮಾಜಿಕ ಸಭ್ಯತೆ ಮೀರಿ ಸುಳ್ಳು ಮಾಹಿತಿ, ವದಂತಿಗಳಿಗೆ ನಿಯಂತ್ರಣ ಮೊದಲಾದ ಷರತ್ತುಗಳ ಮೂಲಕ ಡಿಜಿಟಲ್ ಸುದ್ದಿ ಸಂಸ್ಥೆಗಳಿಗೆ ಮೂಗುದಾರ ಹಾಕುವ ಲೆಕ್ಕಾಚಾರವಿದೆ.
ಡಿಜಿಟಲ್ ಪೋರ್ಟಲ್ ಸೇರಿ ಓಟಿಟಿ ವೇದಿಕೆಗಳನ್ನು ನಿಯಂತ್ರಿಸುವ ಈ ಕಾಯ್ದೆ ಕಾನೂನು ಬಾಹಿರವಾಗಿದೆ. ಮೂಲ ಐಟಿ ಕಾಯ್ದೆ ವ್ಯಾಪ್ತಿಗೊಳಪಡದ ಸಂಸ್ಥೆಗಳನ್ನೂ ಸಹ ಕಾಯ್ದೆಗೆ ಅನುಗುಣವಾಗಿ ನಿಯಂತ್ರಿಸಲು ಕೇಂದ್ರ ಮುಂದಾಗಿದೆ. ಐಟಿ ಕಾಯ್ದೆಯಲ್ಲಿ ಡಿಜಿಟಲ್ ಮೀಡಿಯಾಗಳನ್ನು ಪ್ರತ್ಯೇಕ ವಿಭಾಗದಲ್ಲಿ ಗುರುತಿಸಿಲ್ಲ ಮತ್ತು ಅವುಗಳಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ.
ಆದರೆ, ಹೊಸ ನಿಯಮಗಳಲ್ಲಿ ಸುಖಾಸುಮ್ಮನೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ನಿಯಮಗಳನ್ನು ಸಂವಿಧಾನಬಾಹಿರವೆಂದು ಘೋಷಿಸುವಂತೆ ಸಂಸ್ಥೆ ಕೋರಿದೆ. ಕೇಂದ್ರದ ಈ ಕಾಯ್ದೆಯ ವಿರುದ್ಧ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪತ್ರಿಕೆಗಳು ತಮ್ಮ ಸಂಪಾದಕೀಯದಲ್ಲೇ ಅಸಮಾಧಾನ ವ್ಯಕ್ತಪಡಿಸಿವೆ. ಈ ಸಂಬಂಧ ರಾಜ್ಯ ಹೈಕೋರ್ಟ್‍ನಲ್ಲಿ ಪ್ರಮುಖ ನ್ಯೂಸ್ ಪೋರ್ಟಲ್‍ಗಳು 3 ಅರ್ಜಿ ಸಲ್ಲಿಸಿವೆ. ಇದೀಗ ಟ್ರೂತ್ ಫೌಂಡೇಶನ್ ಕೂಡ ತನ್ನ ಆಕ್ಷೇಪವನ್ನು ಹೈಕೋರ್ಟ್ ಮುಂದೆ ಸಲ್ಲಿಸಿದೆ.







