ಐಪಿಎಲ್ ಪಂದ್ಯಗಳ ಆತಿಥ್ಯ ವಹಿಸಲು ಹೈದರಾಬಾದ್ ಸಿದ್ಧ: ಅಝರುದ್ದೀನ್

ಹೈದರಾಬಾದ್: ಮುಂಬೈನಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಮುಂದಿನ ಆವೃತ್ತಿಯ ಐಪಿಎಲ್ ಪಂದ್ಯಗಳನ್ನು ಮುಂಬೈ ಬದಲು ಹೈದರಾಬಾದ್‌ನ ಕ್ರೀಡಾಂಗಣದಲ್ಲಿ ನಡೆಸುವುದಕ್ಕೆ ಆತಿಥ್ಯ ವಹಿಸಲು ಹೈದರಾಬಾದ್ ಕ್ರಿಕೆಟ್ ಸಿದ್ಧವಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಮುಹಮ್ಮದ್ ಅಝರುದ್ದೀನ್ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ತಿಳಿಸಿದ್ದಾರೆ.
ಈ ಋತುವಿನಲ್ಲಿ ಐಪಿಎಲ್ ಪಂದ್ಯಗಳನ್ನು ಮುಂಬೈ, ಬೆಂಗಳೂರು, ಚೆನ್ನೈ, ಕೋಲ್ಕತಾ, ಅಹಮದಾಬಾದ್ ಮತ್ತು ದಿಲ್ಲಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಹೈದರಾಬಾದ್‌ನ್ನು ಐಪಿಎಲ್ ಆಡಳಿತ ಮಂಡಳಿ ಮತ್ತು ಬಿಸಿಸಿಐ ಆರಂಭದಲ್ಲಿ ಕಡೆಗಣಿಸಿವೆ. ಹೀಗಿದ್ದರೂ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಹತ್ತು ಮಂದಿ ಗ್ರೌಂಡ್ಸ್‌ಮನ್‌ಗಳಿಗೆ ಕೋವಿಡ್-19 ವೈರಸ್ ಸೋಂಕು ತಗಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಹೈದರಾಬಾದ್ ಮತ್ತು ಇಂದೋರ್ ಪಂದ್ಯಾವಳಿಗಳನ್ನು ಆಯೋಜಿಸಲು ಬದಲಿ ಸ್ಥಳಗಳೆಂದು ಗುರುತಿಸುವ ನಿಟ್ಟಿನಲ್ಲಿ ಬಿಸಿಸಿಐ ಚಿಂತನೆ ನಡೆಸಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಬಗ್ಗೆ ಸಂಘಟಕರು ಆತಂಕಗೊಂಡಿದ್ದಾರೆ. ಶುಕ್ರವಾರ ಸಂಜೆಯವರೆಗೆ ಪ್ರಕರಣಗಳ ಸಂಖ್ಯೆ 8 ಆಗಿತ್ತು, ಆದರೆ ಈಗ ಅದು 10ಕ್ಕೇರಿದೆ. ಅಷ್ಟು ಮಾತ್ರವಲ್ಲ ಈವೆಂಟ್ ಮ್ಯಾನೇಜ್‌ಮೆಂಟ್ ತಂಡದ ಆರು ಸದಸ್ಯರಿಗೂ ಕೊರೋನ ವೈರಸ್ ಸೋಂಕು ಬಾಧಿಸಿದೆ. ಅವರನ್ನು ಐಸೋಲೇಶನ್‌ಗೆ ಕಳುಹಿಸಲಾಗಿದೆ.