ದೇಶದಲ್ಲಿ ಮೊದಲ ಬಾರಿ ಒಂದೇ ದಿನ ಲಕ್ಷದ ಗಡಿ ದಾಟಿದ ಕೋವಿಡ್ ಸೋಂಕು

ಸಾಂದರ್ಭಿಕ ಚಿತ್ರ (source: PTI)
ಹೊಸದಿಲ್ಲಿ, ಎ.5: ದೇಶದ ಕೊರೋನ ವೈರಸ್ ಸಾಂಕ್ರಾಮಿಕದ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದಲ್ಲಿ ದಿನದ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ. ಇಡೀ ವಿಶ್ವದಲ್ಲೇ ಅಮೆರಿಕ ಹೊರತುಪಡಿಸಿದ ಉಳಿದ ಯಾವ ದೇಶದಲ್ಲೂ ಒಂದೇ ದಿನ ಪ್ರಕರಣಗಳ ಸಂಖ್ಯೆ ಆರಂಕಿ ತಲುಪಿದ ನಿದರ್ಶನಗಳಿಲ್ಲ.
ರವಿವಾರ ಭಾರತದಲ್ಲಿ 1,03,844 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ. ಮಹಾರಾಷ್ಟ್ರದಲ್ಲೇ 57,074 ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಇದುವರೆಗೆ ಗರಿಷ್ಠ ಅಂದರೆ 98,795 ಪ್ರಕರಣಗಳು 2020ರ ಸೆಪ್ಟಂಬರ್ 17ರಂದು ದಾಖಲಾಗಿತ್ತು. ಇದಕ್ಕೆ ಹೋಲಿಸಿದರೆ ರವಿವಾರ ದೃಢಪಟ್ಟ ಪ್ರಕರಣಗಳ ಸಂಖ್ಯೆ 5 ಸಾವಿರದಷ್ಟು ಅಧಿಕ.
ಕೇವಲ 52 ದಿನಗಳ ಹಿಂದೆ ಭಾರತದಲ್ಲಿ ಎರಡನೇ ಅಲೆ ಭಾರತದಲ್ಲಿ ಕಾಣಿಸಿಕೊಂಡಿದ್ದು, ಮೊದಲ ಅಲೆಯಲ್ಲಿ ಕಾಣಿಸಿಕೊಂಡಿದ್ದಕ್ಕಿಂತಲೂ ಅಧಿಕ ಪ್ರಕರಣ ಈಗಾಗಲೇ ದಾಖಲಾಗಿದೆ. ಏಳು ದಿನಗಳ ಸರಾಸರಿ ಪ್ರಕರಣಗಳ ಸಂಖ್ಯೆ ಫೆಬ್ರವರಿ 11ಕ್ಕೆ 11,364 ಇದ್ದುದು ಎಪ್ರಿಲ್ 4ರ ವೇಳೆಗೆ ಏಳು ಪಟ್ಟು ಹೆಚ್ಚಿ 78,138ಕ್ಕೇರಿದೆ.
ದೇಶದಲ್ಲಿ ರವಿವಾರ ಸಕ್ರಿಯ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕಿಂತಲೂ ಹೆಚ್ಚು ಏರಿಕೆಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 7 ಲಕ್ಷದ ಗಡಿ ದಾಟಿದೆ. ದೇಶದಲ್ಲಿ ಮಾರ್ಚ್ 29ರಿಂದ ಎಪ್ರಿಲ್ 4ರ ಅವಧಿಯಲ್ಲಿ 5,48,625 ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದು, ಕಳೆದ ವರ್ಷದ ಸೆಪ್ಟಂಬರ್ 28- ಅಕ್ಟೋಬರ್ 4ರ ಅವಧಿಯಲ್ಲಿ 5.5 ಲಕ್ಷ ಪ್ರಕರಣಗಳು ದಾಖಲಾಗಿದ್ದವು. ಈ ವಾರ ದಾಖಲಾದ ಪ್ರಕರಣ ಸಂಖ್ಯೆ ಹಿಂದಿನ ವಾರಕ್ಕಿಂತ 1.55 ಲಕ್ಷದಷ್ಟು ಅಧಿಕ. ಇದು ಭಾರತದಲ್ಲಿ ಸಾಂಕ್ರಾಮಿಕ ಆರಂಭವಾದ ಬಳಿಕ ಗರಿಷ್ಠ ಪ್ರಮಾಣದ ಏರಿಕೆಯಾಗಿದೆ.