ಬಂಗಾಳದಲ್ಲಿ ತೃಣಮೂಲ ಪರ ಜಯಾ ಬಚ್ಚನ್ ಚುನಾವಣಾ ಪ್ರಚಾರ

ಕೋಲ್ಕತಾ: ಮೂರನೇ ಬಾರಿ ಬಂಗಾಳದಲ್ಲಿ ಅಧಿಕಾರಕ್ಕೇರಲು ಪ್ರಯತ್ನಿಸುತ್ತಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರಸ್ ಪಕ್ಷಕ್ಕೆ ಸೋಮವಾರ ಹೊಸ ಬಲ ಬಂದಿದೆ. ಹಿರಿಯ ನಟಿ ಹಾಗೂ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರು ಈಗ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರೆ.
ತೃಣಮೂಲದ ತಾರಾ ಪ್ರಚಾರಕರ ಪಟ್ಟಿಯಲ್ಲಿರುವ ಜಯಾ ಬಚ್ಚನ್ ಅವರ ಉಪಸ್ಥಿತಿಯು ಬಂಗಾಳವು ತನ್ನ ಸ್ವಂತ ಮಗಳನ್ನು ಬಯಸುತ್ತದೆ ಎಂಬ ತೃಣಮೂಲದ ಜನಪ್ರಿಯ ಘೋಷಣೆಯನ್ನು ಬಲಪಡಿಸಲಿದೆ.
ಜಬಲ್ಪುರದ ಬಂಗಾಳಿ ಸೂಪರ್ ಸ್ಟಾರ್ ಜಯಾ ಬಚ್ಚನ್ ಅವರು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ರನ್ನು ವಿವಾಹವಾಗಿದ್ದಾರೆ. ಜಯಾ ಅವರನ್ನು ಸಾಮಾನ್ಯವಾಗಿ ಬಾಂಗ್ಲಾರ್ ಜಮೈ ಅಥವಾ ಬಂಗಾಳದ ಸೊಸೆ ಎಂದು ಕರೆಯಲಾಗುತ್ತದೆ.
ರವಿವಾರ ಸಂಜೆ ಕೋಲ್ಕತಾಗೆ ಆಗಮಿಸಿರುವ ಜಯಾ ಬಚ್ಚನ್ ಅವರು ಮೂರು ಬಾರಿಯ ಟೋಲಿಗಂಜ್ ಶಾಸಕರಾಗಿ ಆಯ್ಕೆಯಾಗಿರುವ ಅರೂಪ್ ಬಿಸ್ವಾಸ್ ಅವರ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಇದೇ ಕ್ಷೇತ್ರದಿಂದ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಜಯಾ ಅವರು ಸುಪ್ರಿಯೊ ವಿರುದ್ದ ಪ್ರಚಾರ ನಡೆಸಲಿದ್ದಾರೆ.
ಟೋಲಿಗಂಜ್ ಕೋಲ್ಕತಾದ ಸಿನೆಮಾ ಜಿಲ್ಲೆಯಾಗಿದೆ. ಇಲ್ಲಿ ಚಲನಚಿತ್ರ ಚಿತ್ರೀಕರಿಸುವ ಹಲವು ಸ್ಟುಡಿಯೊಗಳಿವೆ.