ದಯವಿಟ್ಟು ನನ್ನ ಪತಿಯನ್ನು ವಾಪಸ್ ಕರೆ ತನ್ನಿ: ಪ್ರಧಾನಿಗೆ ಕಾಣೆಯಾದ ಯೋಧನ ಪತ್ನಿ ಒತ್ತಾಯ

ಹೊಸದಿಲ್ಲಿ: ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ಮಾವೋವಾದಿಗಳೊಂದಿಗೆ ನಡೆದಿದ್ದ ಎನ್ ಕೌಂಟರ್ ಸ್ಥಳದಿಂದ ನಾಪತ್ತೆಯಾಗಿರುವ 35 ವರ್ಷದ ಕಾನ್ ಸ್ಟೇಬಲ್ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರಿಗಾಗಿ ಭದ್ರತಾ ಪಡೆಗಳು ಭಾರಿ ಶೋಧ ಕಾರ್ಯಾಚರಣೆ ನಡೆಸುತ್ತಿರುವ ಮಧ್ಯೆ, ಮಾವೋವಾದಿ ಕಾರ್ಯಕರ್ತರು, ಸೈನಿಕನನ್ನು ಸೆರೆಯಲ್ಲಿಟ್ಟುಕೊಂಡಿದ್ದಾರೆ ಎಂಬ ವರದಿಗಳು ಹೊರಬರುತ್ತಿದ್ದಂತೆ ಎಚ್ಚರಿಕೆಯ ಗಂಟೆಗಳು ಮೊಳಗುತ್ತಿವೆ.
ತನ್ನ ಪತಿ ಸುರಕ್ಷಿತವಾಗಿ ಮರಳುವಂತೆ ನೋಡಿಕೊಳ್ಳಬೇಕೆಂದು ಮಾವೋವಾದಿಗಳ ಒತ್ತೆಸೆರೆಯಲ್ಲಿದ್ದಾರೆ ಎನ್ನಲಾದ ಯೋಧ ರಾಕೇಶ್ವರ ಸಿಂಗ್ ಅವರ ಪತ್ನಿ ಮೀನೂ ಮನ್ಹಾಸ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.
"ನೀವು ಅಭಿನಂದನ್ (ವರ್ಧಾಮಾನ್) ರನ್ನು ಪಾಕಿಸ್ತಾನದಿಂದ ಮರಳಿ ಕರೆ ತಂದಂತೆ, ದಯವಿಟ್ಟು ನನ್ನ ಪತಿಯನ್ನೂ ವಾಪಸ್ ಕರೆತನ್ನಿ" ಎಂದು ಅವರು ಪ್ರಧಾನಿಯನ್ನು ಮೀನೂ ಒತ್ತಾಯಿಸಿದರು.
ಸಿಆರ್ ಪಿ ಎಫ್ ಜಮ್ಮುವಿನಲ್ಲಿರುವ ರಾಕೇಶ್ವರ ಸಿಂಗ್ ಮನ್ಹಾಸ್ ಅವರ ಕುಟುಂಬವನ್ನು ಭೇಟಿ ಮಾಡಲು ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದೆ. ಕಾಣೆಯಾದ ಯೋಧ ಮನ್ಹಾಸ್ ನಕ್ಸಲರ ಸೆರೆಯಲ್ಲಿದ್ದಾನೆ ಎಂದು ಛತ್ತೀಸ್ ಗಢ ಮೂಲದ ಪತ್ರಕರ್ತರೊಬ್ಬರ ಹೇಳಿಕೆಯನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಪಡೆ ಪ್ರಯತ್ನಿಸುತ್ತಿದೆ ಎಂದು ಭರವಸೆ ನೀಡಿದರು.
ಸಿಆರ್‌ಪಿಎಫ್ ಅಧಿಕಾರಿಗಳು ಮತ್ತು ಕಾಣೆಯಾದ ಯೋಧನ ಪತ್ನಿ ಮೀನೂ ಮನ್ಹಾಸ್ ಟಿವಿ ಪತ್ರಕರ್ತರೊಬ್ಬರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ರಾಕೇಶ್ವರ ಸಿಂಗ್ ಅವರು ನಕ್ಸಲರ ಸೆರೆಯಲ್ಲಿದ್ದಾರೆ ಎಂದು ಮೀನೂ ಮನ್ಹಾಸ್ ಗೆ ಪತ್ರಕರ್ತ ತಿಳಿಸಿದರು. ತನ್ನ ಗಂಡನನ್ನು ಬಿಡುಗಡೆ ಮಾಡುವಂತೆ ನಕ್ಸಲರಿಗೆ ಮನವಿ ಮಾಡುವ ವೀಡಿಯೊ ಕಳುಹಿಸುವಂತೆ ಮೀನೂ ಮನ್ಹಾಸ್ ಗೆ ಪತ್ರಕರ್ತರು ತಿಳಿಸಿದ್ದಾರೆ.
ಶನಿವಾರ ಮಧ್ಯಾಹ್ನ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿ ಜೊನಾಗುಡಾ ಮತ್ತು ತೆಕಲ್ಗುಡ ಗ್ರಾಮಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ 22 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಹಾಗೂ 31 ಮಂದಿ ಗಾಯಗೊಂಡಿದ್ದಾರೆ.







