ಮಹಾರಾಷ್ಟ್ರದ ಗೃಹ ಸಚಿವರಾಗಿ ದಿಲೀಪ್ ವಾಲ್ಸೆ ಪಾಟೀಲ್ ಆಯ್ಕೆ ಸಾಧ್ಯತೆ
ಮುಂಬೈ: ತನ್ನ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪವನ್ನು ಸಿಬಿಐ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್ ಆದೇಶ ನೀಡಿದ ಬೆನ್ನಿಗೆ ಅನಿಲ್ ದೇಶ್ ಮುಖ್ ಮಹಾರಾಷ್ಟ್ರದ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೇಶ್ ಮುಖ್ ಅವರಿಂದ ತೆರವಾಗಿರುವ ಸ್ಥಾನಕ್ಕೆ ಪ್ರಸ್ತುತ ರಾಜ್ಯ ಕಾರ್ಮಿಕ ಹಾಗೂ ಅಬಕಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ದಿಲೀಪ್ ವಾಲ್ಸೆ ಪಾಟೀಲ್ ಅವರ ಹೆಸರನ್ನು ಪರಿಗಣಿಸಲಾಗುತ್ತಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.
ಜಯಂತ್ ಪಾಟೀಲ್ ಹಾಗೂ ದಿಲೀಪ್ ವಾಲ್ಸೆ ಪಾಟೀಲ್ ಅವರು ಗೃಹ ಸಚಿವ ಸ್ಥಾನಕ್ಕೆ ಎನ್ ಸಿಪಿ ವರಿಷ್ಠ ಶರದ್ ಪವಾರ್ ಅವರ ಆಯ್ಕೆಯಾಗಿದ್ದರು. ಆದರೆ ಈ ಇಬ್ಬರು ನಾಯಕರು ಗೃಹ ಸಚಿವ ಸ್ಥಾನ ವಹಿಸಿಕೊಳ್ಳಲು ನಿರಾಕರಿಸಿದ ಬಳಿಕ ದೇಶ್ ಮುಖ್ ಅವರಿಗೆ ಈ ಸ್ಥಾನ ಲಭಿಸಿತ್ತು ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಇತ್ತೀಚೆಗೆ ಹೇಳಿದ್ದರು.
"ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ರಾಜೀನಾಮೆ ನೀಡಿದ್ದರೂ, ಅವರ ರಾಜೀನಾಮೆ ತಡವಾಗಿ ಬಂದಿದೆ. ಇಡೀ ವಿಷಯದ ಬಗ್ಗೆ ಉದ್ಧವ್ ಠಾಕ್ರೆ ಏಕೆ ಮೌನವಾಗಿದ್ದಾರೆ. ಉದ್ಧವ್ ಠಾಕ್ರೆ ಅವರು ಆಡಳಿತ ನಡೆಸುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ. ಇಡೀ ಪ್ರಕರಣದ ಪರಿಣಾಮಗಳನ್ನು ಶರದ್ ಪವಾರ್ ಅರಿತುಕೊಂಡಿರಬೇಕು ಹಾಗೂ ದೇಶಮುಖ್‌ಗೆ ಕ್ಲೀನ್‌ಚಿಟ್ ನೀಡಬಾರದು'' ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸೋಮವಾರ ಹೇಳಿದ್ದಾರೆ.