ಮಾರ್ಚ್ ತಿಂಗಳಲ್ಲಿ 15-24 ವಯೋಮಾನದವರಲ್ಲಿ ಕೊರೋನ ಪಾಸಿಟಿವ್ ಅಧಿಕ: ಉಡುಪಿ ಡಿಸಿ ಜಗದೀಶ್
'ಚುನಾವಣಾ ಪ್ರಚಾರಕ್ಕೆ ತೆರಳಿದ ಜನಪ್ರತಿನಿಧಿಗಳು ಆರ್‌ಟಿಪಿಸಿಆರ್ ಪರೀಕ್ಷೆಯೊಂದಿಗೆ ಬನ್ನಿ'

ಉಡುಪಿ, ಎ.5: ಜಿಲ್ಲೆಯಲ್ಲಿ ಫೆಬ್ರವರಿ ತಿಂಗಳು ಕೋವಿಡ್‌ನ ಎರಡನೇ ಅಲೆ ಪ್ರಾರಂಭಗೊಂಡ ಬಳಿಕ ಮಾರ್ಚ್ 1ರಿಂದ ಎ.4ರವರೆಗೆ 15ರಿಂದ 24 ವಯೋಮಾನದವರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಕಂಡುಬಂದಿದೆ. ಈ ಅವಧಿಯಲ್ಲಿ ಪತ್ತೆಯಾದ ಒಟ್ಟು 1,966 ಪಾಸಿಟಿವ್ ಪ್ರಕರಣಗಳಲ್ಲಿ ಶೇ.59.21 (1,164) ಈ ವಯೋವರ್ಗದವರದ್ದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು 45 ವರ್ಷ ಮೇಲಿನವರೆಲ್ಲರಿಗೂ ಲಸಿಕೆ ನೀಡುವುದು ಹಾಗೂ ಕೋವಿಡ್‌ನ ಒಟ್ಟಾರೆ ಸ್ಥಿತಿಗತಿಯ ಕುರಿತು ಮಾಹಿತಿಯನ್ನು ನೀಡುತಿದ್ದರು.
ಮಾ.1ರಿಂದ ಎ.4ರವರೆಗೆ ಬಂದಿರುವ 1,966 ಪಾಸಿಟಿವ್ ಕೇಸುಗಳಲ್ಲಿ ಶೇ.20.30 (399) 25ರಿಂದ 49ವರ್ಷ ಪ್ರಾಯದವರಾಗಿದ್ದರೆ, ಶೇ.15.92 (313) 50 ವರ್ಷ ಮೇಲಿನವರದ್ದು. 0-14 ವರ್ಷದೊಳಗಿನ 90 (ಶೇ.4.58) ಮಂದಿ ಮಕ್ಕಳು ಸಹ ಪಾಸಿಟಿವ್ ಬಂದಿದ್ದಾರೆ ಎಂದವರು ಹೇಳಿದರು.
ಈ ಅವಧಿಯಲ್ಲಿ ಕೋವಿಡ್ ಪರೀಕ್ಷೆಗೊಳಪಟ್ಟ 15ರಿಂದ 24 ವರ್ಷ ವಯೋಮಿತಿ ಯೊಳಗಿನ ಒಟ್ಟು 19,057 ಮಂದಿ ಯುವ ಜನತೆಯಲ್ಲಿ 1164 ಮಂದಿಯಲ್ಲಿ (ಶೇ.6.11) ಸೋಂಕು ಪತ್ತೆಯಾಗಿದ್ದರೆ, 18,296 ಮಂದಿ 25ರಿಂದ 49 ವಯೋಮಾನದವರ ಪೈಕಿ 399 (ಶೇ.2,18), 14,787 ಮಂದಿ 50 ವರ್ಷ ಮೇಲ್ಪಟ್ಟವರ ಪೈಕಿ 313 (ಶೇ.2.12) ಮಂದಿಯಲ್ಲಿ ಹಾಗೂ 5004 ಮಂದಿ 0ರಿಂದ 14 ವಯೋಮಾನದ ಮಕ್ಕಳ ಪೈಕಿ 90 (ಶೇ.1.8) ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ ಎಂದವರು ವಿವರಿಸಿದರು.
ಜಿಲ್ಲೆಯಲ್ಲಿ ಅತ್ಯಧಿಕ ಪರೀಕ್ಷೆ: ಉಡುಪಿ ಜಿಲ್ಲೆ ಕೋವಿಡ್ ಪರೀಕ್ಷೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಭಾರತದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ 1,79,801 ಮಂದಿಯ ಪರೀಕ್ಷೆ ನಡೆದರೆ, ಕರ್ನಾಟಕದಲ್ಲಿ ಇದು 3,12,783 ಆಗಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ 3,29,569 ಮಂದಿಯ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದರು.
ಕೋವಿಡ್‌ನಿಂದ ಮರಣ ಪ್ರಮಾಣ ಭಾರತದಲ್ಲಿ ಶೇ.1.32 ಆದರೆ, ಕರ್ನಾಟಕದಲ್ಲಿ 1.24 ಹಾಗೂ ಉಡುಪಿ ಜಿಲ್ಲೆಯಲ್ಲಿ ಶೇ.0.75 ಆಗಿದೆ ಎಂದರು. ಇಂದು ಜಿಲ್ಲೆಯ ಆರೋಗ್ಯ ಸೇವೆಯ ಗುಣಮಟ್ಟ ಉತ್ತಮವಾಗಿರುವುದರ ದ್ಯೋತಕ. ಇದಕ್ಕಾಗಿ ಸರಕಾರಿ, ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯರ ಸೇವೆಯನ್ನು ತಾವು ಅಭಿನಂದಿಸುವುದಾಗಿ ಅವರು ತಿಳಿಸಿದರು.
15 ದಿನಗಳಿಂದ ಪ್ರಮಾಣ ಅಧಿಕ: ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 4,28,440 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಜನವರಿ ತಿಂಗಳವರೆಗೆ ಇಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.0.5 ಇದ್ದಿದ್ದು, ಇದೀಗ 15 ದಿನಗಳ ಪ್ರಕರಣಗಳಿಂದ ಶೇ.4.25ಕ್ಕೇರಿದೆ ಎಂದರು.
ಕಳೆದ 15 ದಿನಗಳಲ್ಲಿ ಜಿಲ್ಲೆಯಲ್ಲಿ 34,912 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಇವುಗಳಲ್ಲಿ 1,483 ಮಂದಿ ಪಾಸಿಟಿವ್ ಬಂದಿದ್ದಾರೆ. ಇದೇ ಶೇ.4.25 ಆಗಿದೆ. ಅದೇ ರೀತಿ ಕಳೆದ ಒಂದು ವಾರದಿಂದ 13,520 ಮಂದಿಯ ಪರೀಕ್ಷೆ ನಡೆಸಿದ್ದು ಇವರಲ್ಲಿ 457 ಮಂದಿ ಪಾಸಿಟಿವ್ (ಶೇ.3.38) ಬಂದಿದ್ದರೆ, ಕಳೆದ ಮೂರು ದಿನಗಳಿಂದ 6656 ಮಂದಿಯನ್ನು ಪರೀಕ್ಷಿಸಿದ್ದು, 218 ಮಂದಿ (ಶೇ.3.27) ಪಾಸಿಟಿವ್ ಬಂದಿದ್ದಾರೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 25,515 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಅದರಲ್ಲಿ 390 ಮಂದಿ ಈಗ ಸೋಂಕಿಗೆ ಸಕ್ರಿಯ ರಾಗಿದ್ದು, ಚಿಕಿತ್ಸೆಯಲ್ಲಿದ್ದಾರೆ. ಇವರಲ್ಲಿ 59 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದರೆ, 331 ಮಂದಿ ಹೋಮ್ ಐಸೋಲೇಷನ್‌ನಲ್ಲಿ ಗುಣಮುಖರಾಗುತಿದ್ದಾರೆ. ಉಡುಪಿಯಲ್ಲಿ ಗುಣಮುಖರಾದವರ ಪ್ರಮಾಣ ಶೇ.97.72 ಆಗಿದೆ ಎಂದು ಜಿ.ಜಗದೀಶ್ ತಿಳಿಸಿದರು.
ಸದ್ಯ ಜಿಲ್ಲೆಯಲ್ಲಿ ಕೇವಲ ನಾಲ್ವರು ಮಾತ್ರ ಐಸಿಯುನಲ್ಲಿ ಚಿಕಿತ್ಸೆಯಲ್ಲಿದ್ದು, 86 ಐಸಿಯು ಬೆಡ್ ಖಾಲಿಯಾಗಿದೆ. 55 ವೆಂಟಿಲೇಟರ್‌ಗಳಲ್ಲಿ ಒಂದು ಮಾತ್ರ ಬಳಕೆಯಲ್ಲಿದೆ. ಒಟ್ಟಾರೆಯಾಗಿ ಶೇ.5ಮಂದಿಯಲ್ಲಿ ಮಾತ್ರ ಸೋಂಕಿನ ಗುಣಲಕ್ಷಣ ಕಂಡುಬರುತ್ತಿದೆ. ಕಳೆದ 15 ದಿನಗಳಿಂದ ಪ್ರತಿ ಪಾಸಿಟಿವ್ ಬಂದವರಿಗೆ ಸರಾಸರಿ 15 ಸಂಪರ್ಕಿತರನ್ನು ಗುರುತಿಸಲಾಗುತ್ತಿದೆ ಎಂದೂ ಅವರು ವಿವರಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ಉಪಸ್ಥಿತರಿದ್ದರು.
ಮಣಿಪಾಲದಲ್ಲಿ ಕಳೆದ ಸುಮಾರು ಒಂದು ತಿಂಗಳಿನಿಂದ ಸಾವಿರಕ್ಕೂ ಅಧಿಕ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಇದರಿಂದ ಜಿಲ್ಲೆಯ ಒಟ್ಟಾರೆ ಪಾಸಿಟಿವಿಟಿ ಪ್ರಮಾಣವೂ ಹೆಚ್ಚಾಗಿದೆ. ಮಾರ್ಚ್‌ನಿಂದ ಎ.4ರವರೆಗೆ ಎಂಐಟಿ ಸೇರಿದಂತೆ ಮಣಿಪಾಲದಲ್ಲಿ ಒಟ್ಟು 8,948 ಮಂದಿಯ ಪರೀಕ್ಷೆ ನಡೆಸಲಾಗಿದ್ದು, ಇವರಲ್ಲಿ 1055 ಮಂದಿ ಪಾಸಿಟಿವ್ ಕಂಡುಬಂದಿದ್ದಾರೆ. ಹೀಗಾಗಿ ಇಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.11.79 ಆಗಿದೆ.
ಇದೇ ಅವಧಿಯಲ್ಲಿ ಮಣಿಪಾಲ ಹೊರತು ಪಡಿಸಿ ಜಿಲ್ಲೆಯಲ್ಲಿ 48,196 ಮಂದಿಯ ಪರೀಕ್ಷೆ ನಡೆದಿದ್ದು, ಇವರಲ್ಲಿ 911 ಮಂದಿ ಪಾಸಿಟಿವ್ ಬಂದಿದ್ದಾರೆ. ಇದರ ಪ್ರಮಾಣ ಶೇ.1.89 ಆಗಿದೆ. ಹೀಗಾಗಿ ಒಟ್ಟಾರೆಯಾಗಿ ಈ ಅವಧಿಯಲ್ಲಿ ಜಿಲ್ಲೆಯಲ್ಲಿ 57,144 ಮಂದಿಯ ಪರೀಕ್ಷೆ ನಡೆದು ಇವರಲ್ಲಿ 1966 ಮಂದಿ ಪಾಸಿಟಿವ್ ಕಂಡುಬಂದಿದೆ. ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಶೇ.3.44 ಮಾತ್ರ ಎಂದು ಜಿ.ಜಗದೀಶ್ ಹೇಳಿದರು.
ಮಣಿಪಾಲದಲ್ಲೂ ಕಂಟೈನ್‌ಮೆಂಟ್ ವ್ಯಾಪ್ತಿಯಲ್ಲಿ ಶೇ.15.43 ಮಂದಿ ಪಾಸಿಟಿವ್ ಬಂದರೆ, ಬಫರ್ ಝೋನ್‌ನಲ್ಲಿ ಶೇ.3.59 ಮಂದಿ ಪಾಸಿಟಿವ್ ಬಂದಿದ್ದಾರೆ ಎಂದೂ ಅವರು ತಿಳಿಸಿದರು.
ಆರ್‌ಟಿಪಿಸಿಆರ್ ಪರೀಕ್ಷೆಯೊಂದಿಗೆ ಬನ್ನಿ
ಕೇರಳಕ್ಕೆ ಚುನಾವಣಾ ಪ್ರಚಾರಕ್ಕಾಗಿ ತೆರಳಿದ ಜನಪ್ರತಿನಿಧಿಗಳು, ಪಕ್ಷಗಳ ಕಾರ್ಯಕರ್ತರು ಸೇರಿದಂತೆ ಮಹಾರಾಷ್ಟ್ರ ಹಾಗೂ ಕೇರಳಕ್ಕೆ ತೆರಳಿದ ಪ್ರತಿಯೊಬ್ಬರು ರಾಜ್ಯ ಸರಕಾರದ ನಿಯಮದಂತೆ ಆರ್‌ಟಿಪಿಸಿಆರ್ ಪರೀಕ್ಷೆಗೊಳಪಟ್ಟು ನೆಗೆಟಿವ್ ವರದಿಯೊಂದಿಗೆ ಜಿಲ್ಲೆಗೆ ಮರಳು ವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮುತುವರ್ಜಿಯಿಂದ ಕೆಲಸ ನಿರ್ವಹಿಸುತಿದ್ದು, ಇದಕ್ಕೆ ಜಿಲ್ಲೆಯ ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಕೈಜೋಡಿಸಬೇಕೆಂದು ಅವರು ಮನವಿ ಮಾಡಿದರು.







