ವಿದ್ಯಾರ್ಥಿಯ ಕೊಲೆ ಪ್ರಕರಣ: ಸಮಗ್ರ ತನಿಖೆಗೆ ಎನ್‌ಎಸ್‌ಯುಐ, ಸಿಎಫ್‌ಐ ಆಗ್ರಹ
ಮಂಗಳೂರು, ಎ.5: ತಲಪಾಡಿ ಸಮೀಪದ ಕೆ.ಸಿ. ರೋಡ್ ಎಂಬಲ್ಲಿ ಶನಿವಾರ ರಾತ್ರಿ ನಡೆದ ವಿದ್ಯಾರ್ಥಿಯ ಕೊಲೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥನಿಗೆ ಕಠಿಣ ಶಿಕ್ಷೆಯಾಗುವಂತೆ ಪೊಲೀಸ್ ಇಲಾಖೆ ಕ್ರಮ ಜರುಗಿಸಬೇಕು ಎಂದು ಎನ್‌ಎಸ್‌ಯುಐ ಮತ್ತು ಸಿಎಫ್‌ಐ ಪ್ರತ್ಯೇಕ ಹೇಳಿಕೆಯಲ್ಲಿ ಆಗ್ರಹಿಸಿದೆ.
ಶಾಲಾ ವಿದ್ಯಾರ್ಥಿ ಆಕಿಫ್‌ನ ಕೊಲೆಯಿಂದ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ ಹಾಗೂ ಸಾರ್ವಜನಿಕರಲ್ಲಿ ಆತಂಕವನ್ನು ಮೂಡಿಸಿದೆ. ಪ್ರಕರಣದ ಸಂಬಂಧ ಪೊಲೀಸರು ಒಬ್ಬನನ್ನು ಬಂಧಿಸಿದ್ದರೂ ಕೂಡ ಕೃತ್ಯದಲ್ಲಿ ಬೇರೆ ಯಾರಾದರು ಇದ್ದಾರೆಯೇ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸ ಬೇಕು ಎಂದು ಎನ್‌ಎಸ್‌ಯುಐ ದ.ಕ.ಜಿಲ್ಲಾಧ್ಯಕ್ಷ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಒತ್ತಾಯಿಸಿದ್ದಾರೆ.
ಈ ಕೊಲೆ ಪ್ರಕರಣವನ್ನು ಪೊಲೀಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಬೇಕು. ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಸಾಕ್ಷ ಸಂಗ್ರಹಿಸಬೇಕು. ಕೃತ್ಯದಲ್ಲಿ ಬೇರೆಯವರ ಪಾತ್ರ ಇದೆಯೇ ಎಂಬುದರ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹಾಗಾಗಿ ನಿಷ್ಪಕ್ಷಪಾತ ತನಿಖೆ ನಡೆಸ ಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಮಂಗಳೂರು ಜಿಲ್ಲಾಧ್ಯಕ್ಷ ಇನಾಯತ್ ಅಲಿ ಮನವಿ ಮಾಡಿದ್ದಾರೆ.





