ಡಿಸಿಎಂ ಮಾಡು ಎಂದು ದೇವರಿಗೆ ಲೆಟರ್ ಬರೆದಿದ್ದು ನೀವೇ ಅಲ್ಲವೇ?: ಶ್ರೀರಾಮುಲುರನ್ನು ಕುಟುಕಿದ ಕಾಂಗ್ರೆಸ್
ಶ್ರೀರಾಮುಲು ಪ್ರತಿಕ್ರಿಯೆ ಏನು ಗೊತ್ತಾ ?

ಬೆಂಗಳೂರು, ಎ.5: ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಸಮಾಜಕಲ್ಯಾಣ ಸಚಿವ ಬಿ.ಶ್ರೀರಾಮುಲು ನಡುವೆ ಟ್ವೀಟ್ ಸಮರ ನಡೆದಿದೆ. ನನ್ನನ್ನು ಡಿಸಿಎಂ ಮಾಡು ಎಂದು ದೇವರಿಗೆ ಲೆಟರ್ ಬರೆದಿದ್ದು ನೀವೇ ಅಲ್ಲವೇ? ಎಂದು ಶ್ರೀರಾಮುಲುರನ್ನು ಕಾಂಗ್ರೆಸ್ ಕಿಚಾಯಿಸಿದರೆ, ಕಾಂಗ್ರೆಸ್ ಪಕ್ಷದ್ದು ಧೃತರಾಷ್ಟ್ರ ಪ್ರೇಮ ಎಂದು ಶ್ರೀರಾಮುಲು ಟ್ವೀಟರ್‍ನಲ್ಲೆ ತಿರುಗೇಟು ನೀಡಿದ್ದಾರೆ.
ಬಿ.ಶ್ರೀರಾಮುಲು ಅವರೇ, ನನ್ನನ್ನು ಡಿಸಿಎಂ ಮಾಡು ಎಂದು ದೇವರಿಗೆ ಲೆಟರ್ ಬರೆದಿದ್ದು ನೀವೇ ಅಲ್ಲವೇ? ಹಿಂದುಳಿದ ವರ್ಗದವನು ಎಂದು ನನ್ನನ್ನು ಬಿಜೆಪಿಯವರೇ ಸೋಲಿಸಿದರು ಎಂದು ಹೇಳಿದ್ದು ನೀವೇ ಅಲ್ಲವೇ? ದೇವರಿಗೆ ಅಷ್ಟೇ ಅಲ್ಲ ಮೋದಿಯವರಿಗೆ ಲೆಟರ್ ಬರೆದರೂ ನಿಮ್ಮನ್ನು ರಾಜ್ಯ ಬಿಜೆಪಿ ಡಿಸಿಎಂ ಮಾಡುವುದಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಿಚಾಯಿಸಿದೆ.
ಅಲ್ಲದೆ, ಅವಕಾಶ ಸಿಕ್ಕರೆ ಸೂಪರ್ ಸಿಎಂ ಬಿ.ವೈ.ವಿಜಯೇಂದ್ರ ಅವರನ್ನು ಡೆಪ್ಯುಟಿ ಸಿಎಂ ಮಾಡಬಲ್ಲರು ಹೊರತು ನಿಮ್ಮನ್ನು ಮಾಡುವುದಿಲ್ಲ. ಇದೆಲ್ಲ ಬಿಟ್ಟು ಹಿಂದುಳಿದ ವರ್ಗಗಳ ನಿಗಮಗಳಿಗೆ ಬಜೆಟ್‍ನಲ್ಲಿ ತೀವ್ರ ಅನ್ಯಾಯವಾಗಿದೆ, ಅದರ ಬಗ್ಗೆ ಧ್ವನಿ ಎತ್ತಿ. ಇಲ್ಲವಾದಲ್ಲಿ ಸಿಎಂ ಪುತ್ರನ ಸೇವೆ ಮಾಡಿಕೊಂಡಿರಿ, ಅವರು ಬೆಳೆಯುತ್ತಾರೆ, ನೀವು ಅಳಿಯುತ್ತೀರಿ ಎಂದು ಕಾಂಗ್ರೆಸ್ ಟೀಕಿಸಿದೆ.
ಇದಕ್ಕೆ ಟ್ವೀಟ್ ಮೂಲಕವೇ ತಿರುಗೇಟು ನೀಡಿರುವ ಶ್ರೀರಾಮುಲು, ಕಾಂಗ್ರೆಸ್ ಪಕ್ಷದ್ದು ಧೃತರಾಷ್ಟ್ರ ಪ್ರೇಮ. ವಿಪಕ್ಷದಲ್ಲಿ ಕುಂತಾಗ ಹಿಂದುಳಿದ ವರ್ಗದ ಬಗ್ಗೆ ಅದೇನು ಪ್ರೀತಿ-ಕಾಳಜಿ? ಅಧಿಕಾರ ಇದ್ದಾಗ ಮಾಡುವ ಕೆಲಸ ಮಾಡಿದ್ದಿದ್ದರೆ ಇವತ್ತು ಜನರು ಮೂಲೆಗೆ ಕೂರಿಸುತ್ತಿದ್ದರೆ? ಸರ್ವಾಧಿಕಾರ ಕಳೆದುಕೊಂಡ ಮೇಲೆ ಖಿನ್ನತೆಗೆ ಒಳಗಾಗುವುದು ಸಾಮಾನ್ಯ. ನಿಮ್ಮ ಪಕ್ಷಕ್ಕೆ ಜನರಿಗಿಂತ ವೈದ್ಯರ ಅವಶ್ಯಕತೆ ತುಂಬ ಇದೆ ಎಂದು ತಿಳಿಸಿದ್ದಾರೆ.
ಸಿಕ್ಕಾಗ ಸಮರ್ಥ ಆಡಳಿತ ಕೊಟ್ಟಿದ್ದಿದ್ದರೆ, ಇವತ್ತು ಡಿಸಿಎಂ ನಾನೋ ಮತ್ತೊಬ್ಬರೋ ಎಂದು ಅವರಿವರ ವಿರುದ್ಧ ಎತ್ತಿಕಟ್ಟುವ ಇಂಥ ದುರ್ಗತಿ ರಾಜ್ಯ ಕಾಂಗ್ರೆಸ್‍ಗೆ ಬರುತ್ತಿರಲಿಲ್ಲ. ಇದರಿಂದ ನಮ್ಮ ಒಗ್ಗಟ್ಟು ಒಡೆಯಬಹುದು ಎಂದುಕೊಂಡಿದ್ದರೆ, ನಿಮ್ಮ ರಾಹುಲ್ ಗಾಂಧಿಯಷ್ಟೇ ಪಕ್ಷದ ಬುದ್ಧಿಮತ್ತೆಯೂ ಇದೆ ಎಂದು ತಿಳಿಯುತ್ತದೆ. ಮುಂದಿನ ಬಾರಿಗೆ ಶುಭವಾಗಲಿ(ಬೆಟರ್ ಲಕ್ ನೆಕ್ಸ್ಟ್ ಟೈಮ್) ಎಂದು ಶ್ರೀರಾಮುಲು ತಿಳಿಸಿದ್ದಾರೆ.







