ಛತ್ತೀಸ್‌ಗಢ ನಕ್ಸಲ್ ದಾಳಿ ಪ್ರಕರಣ ಗುಪ್ತಚರ ವೈಫಲ್ಯವಲ್ಲ: ಸಿಆರ್‌ಪಿಎಫ್ ಡಿಜಿ

ಹೊಸದಿಲ್ಲಿ, ಎ.5: ಛತ್ತೀಸ್‌ಗಢದ ಬಸ್ತಾರ್ ವಲಯದಲ್ಲಿ ನಕ್ಸಲರಿಂದ 22 ಯೋಧರು ಹತರಾದ ಪ್ರಕರಣ ಗುಪ್ತಚರ ಅಥವಾ ಕಾರ್ಯಾಚರಣೆ ವೈಫಲ್ಯವಲ್ಲ ಎಂದು ಸಿಆರ್‌ಪಿಎಫ್ ಮಹಾನಿರ್ದೇಶಕ ಕುಲ್‌ದೀಪ್ ಸಿಂಗ್ ಹೇಳಿದ್ದಾರೆ.
ನಕ್ಸಲರ ಉಪಸ್ಥಿತಿ ಬಗ್ಗೆ ಸುಳ್ಳುಮಾಹಿತಿ ನೀಡಿ ಯೋಧರನ್ನು ಟ್ರಾಪ್ ಮಾಡಲಾಗಿದೆ ಎಂಬ ವರದಿಯನ್ನು ನಿರಾಕರಿಸಿದ ಅವರು, ಟ್ರಾಪ್ ಮಾಡಿದ್ದರೆ ಇನ್ನಷ್ಟು ಯೋಧರು ಬಲಿಯಾಗುತ್ತಿದ್ದರು. ಭದ್ರತಾ ಪಡೆಗಳು ಗರಿಷ್ಟ ಹಾನಿಗೆ ಒಳಗಾಗುವ ಪ್ರದೇಶದಲ್ಲಿ ನಕ್ಸಲರು ಹೊಂಚು ದಾಳಿ ನಡೆಸಿದ್ದಾರೆ. ನಕ್ಸಲ್ ನಿಯಂತ್ರಣದಲ್ಲಿರುವ ಪ್ರದೇಶದ ಮೂಲಕ ನಾವು ಮುಂದುವರಿಯಬೇಕಿದ್ದರಿಂದ ಅವರು ನಮಗಿಂತ ಹೆಚ್ಚಿನ ಅನುಕೂಲ ಹೊಂದಿದ್ದರು. ನಮ್ಮ ಮೇಲೆ ಲಘು ಮೆಷಿನ್‌ಗನ್‌ನಿಂದ ದಾಳಿ ನಡೆಸಲಾಗಿದೆ.
ಭದ್ರತಾ ಪಡೆಯ ಯೋಧರು ದಿಟ್ಟವಾಗಿ ಪ್ರತ್ಯುತ್ತರ ನೀಡಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ. ಮಾವೋವಾದಿ ನಕ್ಸಲರ ತಂಡಕ್ಕೂ ಸಾಕಷ್ಟು ಹಾನಿಯಾಗಿದೆ. ಗಾಯಗೊಂಡವರನ್ನು ಮತ್ತು ಮೃತಪಟ್ಟವರನ್ನು ಆ ಪ್ರದೇಶದಿಂದ ಸಾಗಿಸಲು ನಕ್ಸಲರು 3 ಲಾರಿಗಳನ್ನು ಬಳಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಸುಮಾರು 25ರಿಂದ 30 ಮಂದಿಗೆ ಗಾಯವಾಗಿದೆ ಮತ್ತು ತಂಡದ ಮೂರನೇ ಒಂದು ಭಾಗದಷ್ಟು ಸದಸ್ಯರು ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ ಎಂದವರು ಹೇಳಿದ್ದಾರೆ.