ಉಡುಪಿ: ಕಂಟೈನ್‌ಮೆಂಟ್ ವಲಯವಾಗಿ ಗೋಪಾಡಿ ಬಿಸಿಎಂ ಹಾಸ್ಟೆಲ್
ಉಡುಪಿ, ಎ.5: ಕುಂದಾಪುರ ತಾಲೂಕು ಗೋಪಾಡಿ ಗ್ರಾಮದಲ್ಲಿರುವ ಬಿಸಿಎಂ ಹಾಸ್ಟೆಲ್‌ನ ಒಟ್ಟು 12 ಮಂದಿ ವಿದ್ಯಾರ್ಥಿಗಳು ಇಂದು ಕೋವಿಡ್-19ಕ್ಕೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಬಿಸಿಎಂ ಹಾಸ್ಟೆಲ್ ಸೇರಿದಂತೆ ಗೋಪಾಡಿ ಗ್ರಾಮವನ್ನು ಕಂಟೈನ್‌ಮೆಂಟ್ ವಲಯವಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಘೋಷಿಸಿದ್ದಾರೆ.
ಹಾಸ್ಟೆಲ್‌ನ ಇಬ್ಬರು ವಿದ್ಯಾರ್ಥಿಗಳಲ್ಲಿ ಕೆಲ ದಿನಗಳ ಹಿಂದೆ ಸೋಂಕು ಕಂಡುಬಂದಿದ್ದು, ಇದೀಗ ಅವರ 12 ಮಂದಿ ಪ್ರಾಥಮಿಕ ಸಂಪರ್ಕಿತರು ನಿನ್ನೆಯ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದಾರೆ. ಹೀಗಾಗಿ ಗೋಪಾಡಿಯನ್ನು ಕಂಟೈನ್‌ಮೆಂಟ್ ವಲಯವಾಗಿ ಪರಿವರ್ತಿಸಲಾಗಿದೆ.
ಬಿಸಿಎಂ ಹಾಸ್ಟೆಲ್‌ನ 100ಮೀ. ವ್ಯಾಪ್ತಿ ಕಂಟೈನ್‌ಮೆಂಟ್ ವಲಯವಾದರೆ, 200ಮೀ. ವ್ಯಾಪ್ತಿ ಬಫರ್ ವಲಯವಾಗಿರುತ್ತದೆ. ಕಂಟೈನ್‌ಮೆಂಟ್ ವಲಯದಲ್ಲಿ ಮೂರು ಮನೆಗಳಿದ್ದು, ಅಲ್ಲಿ 9 ಮಂದಿ ಸದಸ್ಯರಿದ್ದಾರೆ. ಇಲ್ಲಿ ಯಾವುದೇ ಅಂಗಡಿಮುಂಗಟ್ಟುಗಳಿಲ್ಲ. ಬಫರ್ ವಲಯದಲ್ಲಿ 45 ಮನೆಗಳೂ 140 ಜನಸಂಖ್ಯೆಯೂ ಇದೆ. ಇದರಲ್ಲಿ 20 ಅಂಗಡಿಗಳು ಹಾಗೂ ಮೂರು ಕಚೇರಿಗಳಿವೆ. ಕುಂದಾಪುರದ ಉಪವಿಭಾಗಾಧಿಕಾರಿ ರಾಜು ಕೆ. ಅವರನ್ನು ಇದರ ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಿಸಲಾಗಿದೆ ಎಂದು ಜಿಲ್ಲಾದಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.







