ನನ್ನನ್ನು ಯಾರೂ, ಎಲ್ಲಿಯೂ ಅಪಹರಣ ಮಾಡಿಲ್ಲ: ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ ಸಂತ್ರಸ್ತೆ

ಬೆಂಗಳೂರು, ಎ.5: ಸಿಡಿ ಪ್ರಕರಣ ಸಂಬಂಧ ತಮ್ಮ ಪುತ್ರಿಯನ್ನು ಅಪಹರಣ ಮಾಡಲಾಗಿದೆ ಎಂದು ಪೋಷಕರು ನೀಡಿದ ದೂರಿನನ್ವಯ ಸಂತ್ರಸ್ತ ಯುವತಿ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.
ಸೋಮವಾರ ಇಲ್ಲಿನ ವಸಂತನಗರದ ಗುರುನಾನಕ್ ಭವನದ 24ನೆ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾದ ಯುವತಿ, ಪ್ರಕರಣದಲ್ಲಿ ನನ್ನನ್ನು ಯಾರೂ, ಎಲ್ಲಿಯೂ ಅಪಹರಣ ಮಾಡಿಲ್ಲ. ನನ್ನ ಇಚ್ಛೆಯಿಂದ ಸ್ನೇಹಿತರೊಂದಿಗೆ ನೆಲೆಸಿದ್ದೆ ಎಂದು ನ್ಯಾಯಾಶಧೀಶರ ಮುಂದೆ ವಿವರಿಸಿದ್ದಾರೆ ಎಂದು ಆಕೆಯ ಪರ ವಕೀಲ ಸೂರ್ಯ ಮುಕುಂದರಾಜ್ ಮಾಹಿತಿ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಅಪಹರಣ ಪ್ರಕರಣ ಸಂಬಂಧ ಪೊಲೀಸ್‍ರ ವಿಚಾರಣೆ ವೇಳೆ ಸಂತ್ರಸ್ತ ಯುವತಿ ನೀಡಿದ್ದ ಹೇಳಿಕೆ ಪ್ರಮಾಣ ಪತ್ರವನ್ನು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದರು.
ಗಂಭೀರ ಆರೋಪ ಪ್ರಕರಣ ಹಿನ್ನೆಲೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ವಹಿಸಲಾಗಿತ್ತು.
ಏನಿದು ಪ್ರಕರಣ
ಸಿಡಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಂತ್ರಸ್ತ ಯುವತಿಯ ಪೋಷಕರು, ತಮ್ಮ ಪುತ್ರಿಯನ್ನು ದುಷ್ಕರ್ಮಿಗಳು ಅಪಹರಣ ಮಾಡಿ ಬೆದರಿಕೆವೊಡ್ಡಿದ್ದಾರೆ ಎಂದು ಆರೋಪಿಸಿ ಎಪಿಎಂಸಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ತದನಂತರ, ಈ ಪ್ರಕರಣ ಸಂತ್ರಸ್ತ ಯುವತಿ ವಾಸವಿದ್ದ ಸ್ಥಳದ ಆಧಾರದಂತೆ ಪ್ರಕರಣವನ್ನು ಬೆಂಗಳೂರಿನ ಆರ್.ಟಿ.ನಗರ ಠಾಣೆಗೆ ವರ್ಗಾವಣೆಯಾಗಿತ್ತು. ಬಳಿಕ ಈ ಪ್ರಕರಣದ ತನಿಖೆಯನ್ನು ಸಿಟ್(ವಿಶೇಷ ತನಿಖಾ ತಂಡ) ಕೈಗೆತ್ತಿಗೊಂಡಿದೆ.
ತಾಯಿಗೆ ಅನಾರೋಗ್ಯ
ಯುವತಿಯ ತಾಯಿಗೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಸೋಮವಾರ ಬೆಳಗ್ಗೆ ವಿಜಯಪುರಕ್ಕೆ ಪೊಲೀಸ್ ಭದ್ರತೆಯಲ್ಲಿ ಕರೆದುಕೊಂಡು ಹೋಗಿ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಯುವತಿಯ ತಾಯಿ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದು, ಎರಡುಮೂರು ದಿನಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಹೇಳಲಾಗಿದೆ.







