ಪಚ್ಚನಾಡಿ ಪ್ಲಾಸ್ಟಿಕ್ ಸಂಸ್ಕರಣಾ ಘಟಕಕ್ಕೆ ನ್ಯಾಯಾಧೀಶೆ ಶೀಲಾ ಎ.ಜಿ. ಭೇಟಿ

ಮಂಗಳೂರು, ಎ.5:ಪಚ್ಚನಾಡಿಯಲ್ಲಿರುವ ಪ್ಲಾಸ್ಟಿಕ್ ಸಂಸ್ಕರಣಾ ಘಟಕದಲ್ಲಿ ರವಿವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ರೂ. ಮೌಲ್ಯದ ಪ್ಲಾಸ್ಟಿಕ್ ತ್ಯಾಜ್ಯಗಳು ಬೆಂಕಿಗಾಹುತಿಯಾಗಿ ನಷ್ಟ ಸಂಭವಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪಾಎ.ಜಿ. ಸೋಮವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಅವರು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸೂಚನೆಯ ಮೇರೆಗೆ ಭೇಟಿ ನೀಡಿದ್ದೇನೆ. ದುರ್ಘಟನೆಯಿಂದ ಸ್ಥಳೀಯರಿಗೆ ತೊಂದರೆಯಾಗಿದೆಯೇ? ಎಂಬ ಬಗ್ಗೆ ವರದಿ ನೀಡಲಾಗುವುದು. ಈ ಘನತ್ಯಾಜ್ಯ ಘಟಕವು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಆದರೆ ಗುತ್ತಿಗೆದಾರರ ಕಾರ್ಯವೈಖರಿಯು ತೃಪ್ತಿ ತಂದಿಲ್ಲ. ಘಟನೆಯಿಂದ ಸುಮಾರು 65 ಲಕ್ಷ ರೂ. ಮೌಲ್ಯದ ಪ್ಲಾಸ್ಟಿಕ್‌ಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ ಎಂದರು.
ಹೊರಗುತ್ತಿಗೆದಾರರು ಘಟಕದಲ್ಲಿ ಕೈಗೊಳ್ಳಬೇಕಾದ ಮಾರ್ಗಸೂಚಿಯನ್ನು ಪಾಲಿಸಿದ್ದಾರಾ? ಬೆಂಕಿ ಅವಘಡದ ನಂತರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಮನಪಾ ಘಟನೆಯ ಕುರಿತು ಏನೇನು ಕ್ರಮ ಕೈಗೊಂಡಿದೆ ಎಂಬುವುದರ ಬಗ್ಗೆ ನ್ಯಾಯಾಧೀಶೆ ಶಿಲ್ಪಾ ಎ.ಜಿ. ಪ್ರಶ್ನಿಸಿದರು.
ಘಟಕದಲ್ಲಿ ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದರೆ ಬೆಂಕಿಯ ಅವಘಡ ಆಗುತ್ತಿರಲಿಲ್ಲ. ನಿರ್ಲಕ್ಷ್ಯದಿಂದ ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಘಟಕದ ಸುತ್ತಲೂ ಸರಿಯಾದ ಆವರಣ ಗೋಡೆ ಇಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದ್ದು, ಘಟನೆಯು ರಾತ್ರಿ ಸಂಭವಿಸಿರುವುದರಿಂದ ಬೆಂಕಿ ತಗುಲಿದ ಬಗ್ಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದರು.
ಬೆಂಕಿಯಿಂದ ಅವಘಡದಿಂದ ಉಂಟಾದ ದಟ್ಟವಾದ ಹೊಗೆ ಪರಿಸರಕ್ಕೆ ಹಾನಿಕಾರಕವಾಗಿದೆ. ಇದರಿಂದ ಸುತ್ತಮುತ್ತಲಿನಲ್ಲಿ ವಾಸಿಸುವ ಜನರಿಗೆ ತೊಂದರೆಯಾಗಿದೆ. ಇದರ ಬಗ್ಗೆ ಪಾಲಿಕೆ ಸರಿಯಾದ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭ ಪಾಲಿಕೆಯ ಇಂಜಿನಿಯರ್ ಅಬ್ದುಲ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು.







