ಕೋವಿಡ್-19 ಮಾರ್ಗಸೂಚಿ: ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ ಕಡ್ಡಾಯ ಪಾಲನೆಗೆ ಆಯುಕ್ತ ಸೂಚನೆ

ಮಂಗಳೂರು, ಎ.5: ಕೋವಿಡ್-19 ಸೋಂಕಿನ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರಕಾರ ರೂಪಿಸಿರುವ ಕೋವಿಡ್ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪಾಲಿಸಬೇಕು ಎಂದು ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಸೂಚನೆ ನೀಡಿದರು.
ನಗರದ ಲಾಲ್‌ಬಾಗ್‌ನಲ್ಲಿರುವ ಮನಪಾ ಕಟ್ಟಡದಲ್ಲಿರುವ ತನ್ನ ಕಚೇರಿ ಸಭಾಂಗಣದಲ್ಲಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣ ಕುರಿತು ಹೋಟೆಲ್, ರೆಸ್ಟೋರೆಂಟ್, ಕಲ್ಯಾಣ ಮಂಟಪ, ಪಾರ್ಟಿಹಾಲ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಸಿನಿಮಾ ಹಾಲ್, ಈಜುಕೊಳ, ಜಿಮ್ ಅಸೋಸಿಯೇಶನ್ ಹಾಗೂ ರೆಸಿಡೆಂಟ್ ವೆಲ್‌ಪೇರ್ ಅಸೋಸಿಯೇಶನ್ ಮಾಲಕರು ಹಾಗೂ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ಮುನ್ನೆಚ್ಚರಿಕೆಗಾಗಿ ಕಡ್ಡಾಯವಾಗಿ ಮುಖಗವಸು, ಸುರಕ್ಷಿತ ಅಂತರ ಪಾಲನೆ, ಹ್ಯಾಂಡ್ ಸ್ಯಾನಿಟೈಸರ್, ಹ್ಯಾಂಡ್ ವಾಷ್‌ಗಳ ಬಳಕೆಯನ್ನು ಜಾರಿಗೊಳಿಸುವುದು ಹಾಗೂ ಸರಕಾರದ ಸೂಚನೆಯಂತೆ ಬಾರ್, ಪಬ್, ಕ್ಲಬ್, ರೆಸ್ಟೊರೆಂಟ್, ಸಿನೆಮಾ ಹಾಲ್, ಜಿಮ್‌ಗಳಲ್ಲಿ ಗರಿಷ್ಟ 50 ಸಂಖ್ಯೆ ಮೀರಿರಬಾರದು ಹಾಗೂ ಎಲ್ಲಾ ರೀತಿಯ ಈಜುಕೊಳಗಳನ್ನು ಮುಚ್ಚುವಂತೆ ಸೂಚನೆ ನೀಡಿದರು.
ಕೋವಿಡ್ ಶಿಷ್ಟಚಾರಗಳು ಪಾಲನೆಯಾಗುತ್ತಿರುವ ಬಗ್ಗೆ ಪಾಲಿಕೆ ವತಿಯಿಂದ ಅಧಿಕಾರಿ / ಸಿಬ್ಬಂದಿಯನ್ನೊಳಗೊಂಡ ಟಾಸ್ಕ್‌ಪೋರ್ಸ್ ತಂಡ ವನ್ನು ರಚಿಸಿ ನಿರಂತರ ಪರಿಶೀಲನೆ ನಡೆಸಲಾಗುವುದು. ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆ ಮಾಡುತ್ತಿರುವುದು ಕಂಡುಬಂದಲ್ಲಿ ಅಂತಹ ವಾಣಿಜ್ಯ ಸಂಸ್ಥೆಯ ಮಾಲಕರಿಗೆ ದಂಡ ವಿಧಿಸಲಾಗುವುದು, ಪುನಾರವರ್ತನೆಯಾದಲ್ಲಿ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಕೊನೆಗೊಳ್ಳುವವರೆಗೆ ಮುಚ್ಚಲಾಗುವುದು ಎಂಬ ಎಚ್ಚರಿಕೆ ನೀಡಿದರು.
ಕೋವಿಡ್ ಸಂಬಂಧಿತ ದೂರುಗಳಿದ್ದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, (0824-2220306) ಬೆಳಿಗ್ಗೆ 7 ರಿಂದ ರಾತ್ರಿ 10 ಗಂಟೆಯವರೆಗೆ ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ ಎಂದರು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಜಂಟಿ ಆಯುಕ್ತ ಡಾ.ಸಂತೋಷ್ ಕುಮಾರ್ ಕಂದಾಯ ಉಪಯುಕ್ತ ಪಿ.ಕೆ. ಬಿನಾಯ್ ಮತ್ತಿತರರು ಉಪಸ್ಥಿತರಿದ್ದರು.








