ಎ.10: ಭಟ್ಕಳದ ಇನಾಯತುಲ್ಲಾ ಶಾಬಂದ್ರಿ ಅಭಿಮಾನಿ ಬಳಗದಿಂದ ಆಯುರ್ವೇದ ಶಿಬಿರ

ಭಟ್ಕಳ: ಕುಂದಾಪುರದ ರೂರಲ್ ಎಜ್ಯುಕೇಶನ್ ಆಯುರ್ವೇದ ಆಸ್ಪತ್ರೆ ಕೋಟೇಶ್ವರ ಇದರ ವತಿಯಿಂದ ಭಟ್ಕಳದ ಇನಾಯತುಲ್ಲಾ ಶಾಬಂದ್ರಿ ಅಭಿಮಾನಿ ಬಳಗ ವತಿಯಿಂದ ಆಯುರ್ವೇದ ಶಿಬಿರವು ಎ. 10ರಂದು ಬೆಳಗ್ಗೆಯಿಂದ ಸಂಜೆಯ ತನಕ ಶಾದಿ ಹಾಲ್‍ನಲ್ಲಿ ಏರ್ಪಡಿಸಲಾಗಿದೆ ಎಂದು ಇನಾಯತುಲ್ಲಾ ಶಾಬಂದ್ರಿ ಹೇಳಿದರು.
ಅವರು ಇಲ್ಲಿನ ಪ್ರವಾಸಿ ಬಂಗಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಆಯುರ್ವೇದ ಆಸ್ಪತ್ರೆಯ ಪ್ರಾಂಶುಪಾಲ ಡಾ. ಪ್ರಸನ್ನ ಐತಾಳ್ ಮಾತನಾಡಿ ಈಗಾಗಲೇ ನಮ್ಮಲ್ಲಿ 100 ಹಾಸಿಗೆಗಳ ಆಸ್ಪತ್ರೆ ಕಾರ್ಯಾರಂಭ ಮಾಡಿದ್ದು ಉತ್ತಮ ಚಿಕಿತ್ಸೆ ಲಭ್ಯವಿದೆ. ಶಿಬಿರದಲ್ಲಿ ನುರಿತ ಆಯುರ್ವೇದ ವೈದ್ಯರು ಆಗಮಿಸುವವರಿದ್ದು ಉಚಿತ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುವುದು. ವಾತ ರೋಗ, ಗಂಟು ನೋವಿಗೆ ಪಂಚಕರ್ಮ ಚಿಕಿತ್ಸೆ ಉತ್ತಮ ಪರಿಹಾರವಾಗಿದೆ. ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸೆ, ಶಲ್ಯತಂತ್ರಕ್ಕೆ (ಸರ್ಜರಿ) ಸಂಬಂಧ ಪಟ್ಟಂತೆ ನುರಿತ ವೈದ್ಯರಿಂದ ಮೂಲವ್ಯಾದಿ ಮತ್ತು ಪಿಸ್ತುಲಾಕ್ಕೆ ಚಿಕಿತ್ಸೆ, ಸಾಮಾನ್ಯ ರೋಗ (ಜನರಲ್ ಮೆಡಿಸಿನ್) ವೈದ್ಯರಿಂದ ತಪಾಸಣೆ ಹಾಗೂ ಚಿಕಿತ್ಸೆ, ಸ್ತ್ರೀಯರಿಗೆ ಸಂಬಂಧ ಪಟ್ಟ ಕಾಯಿಲೆಗೆ ಸೂಕ್ತ ತಪಾಸಣೆ ಹಾಗೂ ಚಿಕಿತ್ಸೆ ನೀಡಲಿದ್ದೇವೆ ಎಂದರು.
ಶಿಬಿರದಲ್ಲಿ ಉಚಿತ ಔಷಧವನ್ನು ನೀಡಲಾಗುವುದಲ್ಲದೇ ಕೊರೊನಾ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಉಚಿತ ಮಾತ್ರೆ ಗಳನ್ನು ನೀಡಲಾಗುವುದು ಎಂದೂ ಹೇಳಿದರು.
ಕಾಲೇಜಿನ ಕುರಿತು ವಿವರಗಳನ್ನು ನೀಡಿದ ಆಯುರ್ವೇದ ಆಸ್ಪತ್ರೆಯ ಪ್ರಮುಖ ಶ್ರೀಧರ ರಾವ್ ಅವರು ಮಾತನಾಡಿ ಆಯುರ್ವೇದ ಎಲ್ಲಾ ಚಿಕಿತ್ಸೆಗಳಿಗೂ ಕೂಡಾ ಮೂಲವಾಗಿದೆ. ಆಯುರ್ವೇದಲ್ಲಿ ರೋಗ ಬಾರದಂತೆ ಚಿಕಿತ್ಸೆ ನೀಡುವುದರಿಂದ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಅಲೋಪತಿಯಲ್ಲಿ ಮಾತ್ರೆಗಳನ್ನು ತಿಂದು ಬೇರೆ ಬೇರೆ ರೋಗಗಳಿಗೆ ದಾರಿ ಮಾಡಿಕೊಳ್ಳುತ್ತೇವೆ. ನಾವು ನಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಂಡಲ್ಲಿ ಯಾವ ರೋಗವೂ ನಮಗೆ ಬರಲು ಸಾಧ್ಯವಿಲ್ಲ. ಹಿತಮಿತವಾದ ಆಹಾರ, ವ್ಯಾಯಾಮ, ಯೋಗ, ಉತ್ತಮ ನಿದ್ದೆ ಬರುವ ಯಾರಿಗೂ ಕೂಡಾ ಕಾಯಿಲೆ ಬರದು ಎಂದ ಅವರು ಕೊರೋನ ಬರದಂತೆಯೂ ಕೂಡಾ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಿ ಕೊಳ್ಳುವ ಮಾತ್ರೆ ಇದ್ದು ಶಿಬಿರದಲ್ಲಿ ಉಚಿತವಾಗಿ ನೀಡಲಾಗುವುದು ಎಂದರು.
ಇನಾಯತುಲ್ಲಾ ಶಾಬಂದ್ರಿ ಅಭಿಮಾನಿ ಬಳಗದ ಮಟ್ಟಾ ಸಾಧಿಕ್ ಮತ್ತಿತರರು ಉಪಸ್ಥಿತರಿದ್ದರು.







