ಕೃಷಿ ಕಾಯಿದೆಯಿಂದ ಎಪಿಎಂಸಿ ದುರ್ಬಲಗೊಂಡಿಲ್ಲ : ಸಂಸದ ನಳಿನ್ ಕುಮಾರ್ ಕಟೀಲ್

ಪುತ್ತೂರು: ಸರ್ಕಾರದ ಕೃಷಿ ಕಾಯಿದೆ ಅನುಷ್ಠಾನ ಮಾಡಿದ್ದರಿಂದ ಯಾವ ಕಾರಣಕ್ಕೂ ರೈತ ಸಮುದಾಯಕ್ಕೆ ಅನ್ಯಾಯವಾಗಿಲ್ಲ. ಎಪಿಎಂಸಿ ದುರ್ಬಲಗೊಂಡಿಲ್ಲ. ಮಧ್ಯವರ್ತಿಗಳ ಹಿಡಿತದಿಂದ ರೈತರನ್ನು ತಪ್ಪಿಸಿ ರೈತರನ್ನೇ ನಿಜವಾದ ಮಾಲಕ ಮಾಡಲಾಗಿದೆ ಎಂದು ಸಂಸದ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಪುತ್ತೂರು ಎಪಿಎಂಸಿ ಮುಖ್ಯ ಪ್ರಾಂಗಣದಲ್ಲಿ ಸೋಮವಾರ ನಡೆದ ನೂತನ ಗೋದಾಮು ಉದ್ಘಾಟನೆ ಮತ್ತು ಸೋಲಾರ್ ಯೋಜನೆ ಅನುಷ್ಠಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೃಷಿ ಕಾಯಿದೆ ವಿಚಾರದಲ್ಲಿ ಕೇಂದ್ರ ಸರಕಾರವನ್ನು ವಿಲನ್ ಮಾಡಲು ಷಡ್ಯಂತ್ರ ಮಾಡಲಾಯಿತು. ಮೊದಲೆಲ್ಲ ಮಧ್ಯವರ್ತಿಗಳು ರೈತರ ಬೆಳೆಗೆ ಬೆಲೆ ನಿಗದಿ ಮಾಡುತ್ತಿದ್ದರೆ, ಈಗ ರೈತನೇ ನಿರ್ಧರಿಸುತ್ತಿದ್ದಾನೆ. ಇವತ್ತು ರೈತನ ಮನೆಯಂಗಳಕ್ಕೆ ಮಾರುಕಟ್ಟೆ ಬರುತ್ತಿದೆ. ಇದು ಚಾರಿತ್ರಿಕ ಬದಲಾವಣೆಯಾಗಿದೆ. ಪ್ರತೀ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ಶೀತಲೀಕರಣ ಘಟಕ ಸ್ಥಾಪಿಸುವ ಮೂಲಕ ರೈತರ ಬೆಳೆಗಳಿಗೆ ಸಂರಕ್ಷಣೆ ನೀಡುವ ಗುರಿ ಇದೆ. ಜತೆಗೆ ಗೋದಾಮುಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಸೋಲಾರ್ ವಿದ್ಯುತ್ ಯೋಜನೆ ಗಳಿಗೆ ಆದ್ಯತೆ ನೀಡುತ್ತಾ ವಿದ್ಯುತ್ ಸ್ವಾವಲಂಬನೆ ಸಾಧಿಸಲು ಗಮನ ನೀಡಲಾಗುತ್ತಿದೆ. ಮೋದಿ ಮಾದರಿಯನ್ನು ಪುತ್ತೂರು ಎಪಿಎಂಸಿ ಅನುಷ್ಠಾನಕ್ಕೆ ತಂದಿದೆ ಎಂದು ಶ್ಲಾಘಿಸಿದರು.
ಎಪಿಎಂಸಿಗೆ ಶಕ್ತಿ ನೀಡಲು ಸರಕಾರ ಬಜೆಟ್‍ನಲ್ಲಿ ಅನುದಾನ ನೀಡಿದೆ ಎಂದು ಹೇಳಿದ ಅವರು, ಲಕ್ಷಾಂತರ ರೈತರಿಗೆ ಫಸಲ್ ಬಿಮಾ ಮತ್ತು ಕಿಸಾನ್ ಸಮ್ಮಾನ್ ಯೋಜನೆಯ ಫಲ ಸಿಕ್ಕಿದೆ ಎಂದರು.
ಬಂದರು ಮತ್ತು ಮೀನುಗಾರಿಕಾ ಖಾತೆಯ ಸಚಿವ ಎಸ್. ಅಂಗಾರ ನೂತನ ಗೋದಾಮು ಉದ್ಘಾಟಿಸಿ ಮಾತನಾಡಿ, ಕೃಷಿಗೆ ಪೂರಕವಾದ ಸವಲತ್ತುಗಳನ್ನು ನೀಡುತ್ತಾ ಹೋದಂತೆ ಕೃಷಿಕರ ಬದುಕಿನ ಉನ್ನತಿಗೂ ಪೂರಕವಾಗುತ್ತದೆ. ಪುತ್ತೂರು ಎಪಿಎಂಸಿಯಲ್ಲಿ ನಡೆಸಲಾದ ಅಭಿವೃದ್ಧಿ ಕಾರ್ಯಕ್ರಮ ಮಾದರಿಯಾಗಿದೆ ಎಂದರು. ಶಾಸಕ ಸಂಜೀವ ಮಠಂದೂರು ಮಾತನಾಡಿ, ಪುತ್ತೂರು ಎಪಿಎಂಸಿ ಪರಿಸರ ಸ್ನೇಹಿಯಾಗಿ ಬೆಳೆಯುತ್ತಿರುವುದು ಶ್ಲಾಘನೀಯ ಎಂದರು.
ನಗರಸಭಾ ಅಧ್ಯಕ್ಷ ಜೀವಂಧರ ಜೈನ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವಾ, ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ವಕ್ವಾಡಿ ಉಪಸ್ಥಿತರಿದ್ದರು. ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಪ್ರಾಸ್ತಾವಿಕವಾಗಿ ಮಾತನಾಡಿ, 35 ಲಕ್ಷ ರೂ. ವೆಚ್ಚದಲ್ಲಿ ಗೋದಾಮು ಮತ್ತು 45 ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ಘಟಕ ಸ್ಥಾಪಿಸಲಾಗಿದೆ. 22 ಕೆವಿ ಸಾಮಥ್ರ್ಯದ ಸೋಲಾರ್ ಘಟಕದಿಂದಾಗಿ ಎಪಿಎಂಸಿಗೆ ಮಾಸಿಕ 40 ಸಾವಿರ ರೂ. ವಿದ್ಯುತ್ ಬಿಲ್ ಉಳಿತಾಯವಾಗುತ್ತದೆ ಎಂದರು, ಎಪಿಎಂಸಿ ಉಪಾಧ್ಯಕ್ಷ ಎನ್. ಎಸ್. ಮಂಜುನಾಥ್ ವಂದಿಸಿದರು. ನಿರ್ದೇಶಕ ಬಾಲಕೃಷ್ಣ ಬಾಣಜಾಲ್ ಕಾರ್ಯಕ್ರಮ ನಿರ್ವಹಿಸಿದರು.







