ಗೌರವಧನ ಪಡೆಯದೆ, ‘ಕಸಾಪ ಗೌರವ ಪ್ರಶಸ್ತಿ’ ಸ್ಥಾಪಿಸಿದ ಮನು ಬಳಿಗಾರ್

ಬೆಂಗಳೂರು, ಎ.5: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ಅವರು ತಮ್ಮ ಅವಧಿಯ ಸಂಪೂರ್ಣ ಗೌರವಧನವನ್ನು ಪಡೆಯದೇ, ಅದೇ ಹಣದಲ್ಲಿ ‘ಕಸಾಪ ಗೌರವ ಪ್ರಶಸ್ತಿ’ ಸ್ಥಾಪಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸುಮಾರು 12.20 ಲಕ್ಷ ರೂ.ಪರಿಷತ್ತಿನಲ್ಲೇ ನಿಶ್ಚಿತ ಠೇವಣಿಯಾಗಿರಿಸಿ ಅದರಿಂದ ಬರುವ ಬಡ್ಡಿ ಹಣದಲ್ಲಿ ಪ್ರತಿವರ್ಷ ಇಬ್ಬರು ಹಿರಿಯ ಸಾಹಿತಿಗಳಿಗೆ `ಕ.ಸಾ.ಪ. ಗೌರವ ಪ್ರಶಸ್ತಿ' ನೀಡಬೇಕೆಂದು ಸೋಮವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.
60 ವರ್ಷ ಪೂರೈಸಿದ, ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಒಬ್ಬ ಮಹಿಳೆ ಹಾಗೂ ಒಬ್ಬ ಪುರುಷನಿಗೆ ತಲಾ 30 ಸಾವಿರ ನಗದು, ಸ್ಮರಣಿಕೆ, ಶಾಲು, ಫಲತಾಂಬೂಲ ನೀಡಬೇಕೆಂದು ತೀರ್ಮಾನಿಸಲಾಯಿತು. ಈ ಸಮಾರಂಭವನ್ನು ಪ್ರತಿವರ್ಷ ಮೇ ತಿಂಗಳಿನಲ್ಲಿ (ಕೇಂದ್ರ) ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಳ್ಳಬೇಕೆಂದೂ ನಿರ್ಣಯಿಸಲಾಯಿತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಕೆ.ರಾಜಕುಮಾರ್ ತಿಳಿಸಿದರು.
ಡಾ.ಮನು ಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಹಿರಿಯ ಸಾಹಿತಿಗಳಾದ ಡಾ.ಬಿ.ಟಿ.ಲಲಿತಾ ನಾಯಕ್, ಡಾ.ವಸುಂಧರಾ ಭೂಪತಿ, ಗೌರವ ಕಾರ್ಯದರ್ಶಿ ಡಾ.ಪದ್ಮರಾಜ ದಂಡಾವತಿ, ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಭಾಗವಹಿಸಿದ್ದರು.





